ತುಂಬೆ ಜಾಕ್‌ವೆಲ್‌ ನಲ್ಲಿ ತ್ಯಾಜ್ಯ ಸಂಗ್ರಹ: ಮಂಗಳೂರು ನಗರದ ಕೆಲವೆಡೆ ಪರ್ಯಾಯ ದಿನಗಳಲ್ಲಿ ನೀರು ಪೂರೈಕೆ

Spread the love

ತುಂಬೆ ಜಾಕ್‌ವೆಲ್‌ ನಲ್ಲಿ ತ್ಯಾಜ್ಯ ಸಂಗ್ರಹ: ಮಂಗಳೂರು ನಗರದ ಕೆಲವೆಡೆ ಪರ್ಯಾಯ ದಿನಗಳಲ್ಲಿ ನೀರು ಪೂರೈಕೆ

ಮಂಗಳೂರು: ಮಂಗಳೂರು ನಗರಕ್ಕೆ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಿ, ಬಳಿಕ ಜಲ ಶುದ್ಧೀಕರಣ ಘಟಕಗಳಲ್ಲಿ ಶುದ್ಧೀಕರಿಸಿ ನಗರದ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನದಿಯ ನೀರಿನ ಹರಿವು ಹೆಚ್ಚಾಗಿದ್ದು, ತುಂಬೆ ಜಾಕ್‌ವೆಲ್‌ನ ಇನ್‌ಟೇಕ್‌ ಭಾಗದಲ್ಲಿ ಮರದ ದಿಮ್ಮಿಗಳು, ಕೊಂಬೆಗಳು, ಪ್ಲಾಸ್ಟಿಕ್ ತ್ಯಾಜ್ಯ, ಬಟ್ಟೆ, ಚೀಲಗಳು, ಹೂಳು ಸೇರಿದಂತೆ ವಿವಿಧ ವಸ್ತುಗಳು ಸಂಗ್ರಹಗೊಂಡಿವೆ. ಇದರಿಂದ ಪಂಪ್‌ನ ಸ್ಟ್ರೈನರ್ ಹಾನಿಗೊಳಗಾಗಿ ಮುಚ್ಚಿಕೊಂಡಿದ್ದು, ಪಂಪಿಂಗ್ ಸಾಮರ್ಥ್ಯ ಕುಂಠಿತವಾಗಿದೆ.

ಇನ್‌ಟೇಕ್‌ ಭಾಗದಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯವನ್ನು ತೆರವುಗೊಳಿಸಿ, ಹಾನಿಗೊಂಡಿರುವ ಸ್ಟ್ರೈನರ್‌ನ್ನು ದುರಸ್ತಿಪಡಿಸಿ ಪಂಪಿಂಗ್ ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಂಪ್‌ಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲು ತಾತ್ಕಾಲಿಕವಾಗಿ ಅಡಚಣೆ ಉಂಟಾಗಲಿದೆ.

ಆದ್ದರಿಂದ ಸುರತ್ಕಲ್ ಪ್ರದೇಶದ ವಾರ್ಡ್‌ಗಳು ಹಾಗೂ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಲೋ ಲೆವೆಲ್ ವಾರ್ಡ್‌ಗಳಿಗೆ ಪರ್ಯಾಯ ದಿನಗಳಲ್ಲಿ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಆಗಸ್ಟ್ 31, 2026ರವರೆಗೆ ತಾತ್ಕಾಲಿಕವಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಸಾರ್ವಜನಿಕರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನೀರನ್ನು ಮಿತವಾಗಿ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಬಳಸುವಂತೆ ಮನವಿ ಮಾಡಲಾಗಿದೆ.


Spread the love
Subscribe
Notify of

0 Comments