ಪಣಂಬೂರು ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳಿಗೆ 7 ವರ್ಷ ಜೈಲು, ₹25 ಸಾವಿರ ದಂಡ
ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2020ರಲ್ಲಿ ನಡೆದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ನ್ಯಾಯಾಲಯವು ತಲಾ 7 ವರ್ಷ ಜೈಲು ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದೆ.
2020ರ ನವೆಂಬರ್ 16ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಬಿಹಾರ ಮೂಲದ ಗೋವಿಂದ್ ಕುಮಾರ್ ಅವರು ಕೆಲಸಕ್ಕೆಂದು ಮನೆಯಿಂದ ಹೊರಟು ಪಣಂಬೂರು ದೀಪಕ್ ಪೆಟ್ರೋಲ್ ಬಂಕ್ನ ಹಿಂಭಾಗದಲ್ಲಿರುವ ಎನ್ಎಂಪಿಎ ಮುಖ್ಯ ಆಡಳಿತ ಕಚೇರಿಯ ಕಡೆಗೆ ತೆರಳುತ್ತಿದ್ದರು.
ಈ ವೇಳೆ ಜಾವೀದ್ ಆಖ್ತರ್ ಅಲಿಯಾಸ್ ಅಖ್ತರ್ (28), ತಂದೆ ಸಂಶುದ್ದೀನ್, ಪೋರ್ಕೋಡಿ, ಕೆಂಜಾರು ಗ್ರಾಮ, ಮಂಗಳೂರು ಹಾಗೂ ತೋಯಿದ್ ಖಾದರ್ ಅಲಿಯಾಸ್ ತೋಯಿ (24), ತಂದೆ ಅನ್ವರ್, ಕಸಬಾ ಬೆಂಗ್ರೆ, ಮಂಗಳೂರು ಎಂಬ ಆರೋಪಿಗಳು ಸ್ಕೂಟರ್ನಲ್ಲಿ ಬಂದು ಗೋವಿಂದ್ ಕುಮಾರ್ ಅವರನ್ನು ಅಡ್ಡಗಟ್ಟಿ ತಡೆದಿದ್ದಾರೆ. ಬಳಿಕ ಕಬ್ಬಿಣದ ರಾಡ್ ತೋರಿಸಿ ಬೆದರಿಸಿ, ಸುಮಾರು ₹5,000 ಮೌಲ್ಯದ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದರು.
ಈ ಕುರಿತು ಗೋವಿಂದ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 56/2020ರಂತೆ ಭಾರತೀಯ ದಂಡ ಸಂಹಿತೆಯ ಕಲಂ 392, 397 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಪಣಂಬೂರು ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಜ್ಮತ್ ಅಲಿ ಅವರು ಕೈಗೊಂಡು, 2020ರ ನವೆಂಬರ್ 17ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳಿಂದ ಕಳವು ಮಾಡಲಾಗಿದ್ದ ಸೊತ್ತನ್ನು ವಶಪಡಿಸಿಕೊಂಡು, ಅವರನ್ನು ಜೆಎಂಎಫ್ಸಿ-2ನೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ಮೊದಲು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಭಾಗಶಃ ನಡೆದಿದ್ದು, ಬಳಿಕ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ಟಿಎಸ್ಸಿ-1)ಕ್ಕೆ ವರ್ಗಾವಣೆಯಾಯಿತು. ಎಸ್ಸಿ ನಂ.84/2021ರಂತೆ ವಿಚಾರಣೆ ಮುಂದುವರಿದಿತ್ತು.
ಸೆಪ್ಟೆಂಬರ್ 16, 2026ರಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಮೋಹನ್ ಜೆ.ಎಸ್. ಅವರು ಇಬ್ಬರು ಆರೋಪಿಗಳನ್ನು ಭಾರತೀಯ ದಂಡ ಸಂಹಿತೆಯ ಕಲಂ 392 ಜೊತೆಗೆ 34ರ ಅಡಿಯಲ್ಲಿ ದೋಷಿಗಳೆಂದು ಪರಿಗಣಿಸಿ, ತಲಾ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದ್ದಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಭದರಿನಾಥ ನೈಯಾರಿ ಅವರು ವಾದ ಮಂಡಿಸಿದ್ದರು.













