ಅವೈಜ್ಞಾನಿಕ ಗುಡ್ಡ ಕತ್ತರಿಸುವಿಕೆ ಆರೋಪ: ಮಣ್ಣು ಕುಸಿತದಿಂದ ಮೂರು ಕುಟುಂಬಗಳು ಸಂಕಷ್ಟಕ್ಕೆ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

Spread the love

ಅವೈಜ್ಞಾನಿಕ ಗುಡ್ಡ ಕತ್ತರಿಸುವಿಕೆ ಆರೋಪ: ಮಣ್ಣು ಕುಸಿತದಿಂದ ಮೂರು ಕುಟುಂಬಗಳು ಸಂಕಷ್ಟಕ್ಕೆ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ಮಂಗಳೂರು: ಮಂಗಳೂರು ತಾಲೂಕಿನ ಗುರುಪುರ ಸಮೀಪದ ಆನೆಬಳಿ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿರುವ ಪರಿಣಾಮ ಭಾರೀ ಮಳೆ ವೇಳೆ ಮಣ್ಣು ಕುಸಿದು ಮೂರು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದ್ದು, ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಸಂತ್ರಸ್ತರು ಆಗ್ರಹಿಸಿದ್ದಾರೆ.

ಸ್ಥಳೀಯ ನಿವಾಸಿಗಳ ಆರೋಪದಂತೆ, ಅವ್ವದ ಎಂಬುವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಜೆಸಿಬಿ ಯಂತ್ರದ ಮೂಲಕ ತಮ್ಮ ಜಾಗದ ಗುಡ್ಡವನ್ನು ಅವೈಜ್ಞಾನಿಕವಾಗಿ ಕತ್ತರಿಸಿ ಮಣ್ಣು ತೆರವುಗೊಳಿಸಿದ್ದರು. ಈ ಕುರಿತು ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಸ್ಥಳೀಯ ನಿವಾಸಿ ಅಜ್ಮಲ್ ಅವರ ಮನೆಯ ಹಿಂಭಾಗದಲ್ಲಿ ಭೂಕುಸಿತ ಉಂಟಾಗಿ ಮನೆಯ ಹಿಂಬದಿ ಭಾಗ ಸಂಪೂರ್ಣ ಕುಸಿದಿದೆ. ಮನೆ ಯಾವುದೇ ಕ್ಷಣದಲ್ಲಿ ಸಂಪೂರ್ಣವಾಗಿ ಧರೆಗುರುಳುವ ಆತಂಕ ಎದುರಾಗಿದ್ದು, ಸಮೀಪದ ಇನ್ನೂ ಮೂರುಕ್ಕೂ ಹೆಚ್ಚು ಮನೆಗಳು ಅಪಾಯದ ಅಂಚಿನಲ್ಲಿವೆ ಎಂದು ನಿವಾಸಿಗಳು ತಿಳಿಸಿದ್ದಾರೆ.

ಪಂಚಾಯತ್ ವತಿಯಿಂದ ಗಂಜಿ ಕೇಂದ್ರಕ್ಕೆ ತೆರಳುವಂತೆ ಮಾತ್ರ ಸೂಚನಾ ಪತ್ರ ನೀಡಲಾಗಿದ್ದು, ಸ್ಥಳೀಯ ದಾನಿಯೊಬ್ಬರ ನೆರವಿನಿಂದ ತಾವು ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ ಎಂದು ಸಂತ್ರಸ್ತ ಅಜ್ಮಲ್ ತಿಳಿಸಿದ್ದಾರೆ.

ಸಂತ್ರಸ್ತರು ಮೂರು ವಾರಗಳ ಹಿಂದೆಯೇ ಪಂಚಾಯತ್‌ಗೆ ದೂರು ನೀಡಿದ್ದರೂ, ಸ್ಥಳಕ್ಕೆ ಭೇಟಿ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕೇವಲ ಟಾರ್ಪಾಲ್ ಹಾಕುವುದಾಗಿ ಭರವಸೆ ನೀಡಿ ತೆರಳಿದ್ದು, ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ, “ಪಂಚಾಯತ್‌ನಲ್ಲಿ ಹಣವಿಲ್ಲ, ಟಾರ್ಪಾಲ್ ಹಾಕಲು ಯಾವುದೇ ಅನುದಾನವಿಲ್ಲ” ಎಂದು ಅಧಿಕಾರಿಗಳು ಹೇಳಿರುವುದರಿಂದ ಸಂತ್ರಸ್ತರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.

ಈ ಪ್ರದೇಶದಲ್ಲೇ ಸುಮಾರು 500 ಕುಟುಂಬಗಳಿಗೆ ನೀರು ಸರಬರಾಜು ಮಾಡುವ ಪಂಚಾಯತ್‌ನ ಬೃಹತ್ ನೀರಿನ ಟ್ಯಾಂಕ್ ಕೂಡ ಇದೆ. ಈ ಭಾಗದಲ್ಲಿ ಮತ್ತಷ್ಟು ಭೂಕುಸಿತ ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿಗೂ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಸಮಾಜಸೇವಕ ಲತೀಫ್ ಗುರುಪುರ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ, ಅವೈಜ್ಞಾನಿಕ ಗುಡ್ಡ ಕತ್ತರಿಸುವಿಕೆ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಮೂರು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಅಪಾಯದಲ್ಲಿರುವ ಮನೆಗಳಿಗೆ ತಕ್ಷಣ ರಕ್ಷಣಾ ಕ್ರಮ ಕೈಗೊಂಡು, ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಶಾಶ್ವತ ಪುನರ್ವಸತಿ ಕಲ್ಪಿಸಬೇಕೆಂದು ಸ್ಥಳೀಯರು ತಾಲೂಕು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.


Spread the love
Subscribe
Notify of

0 Comments