ಉಪ್ಪಿನಂಗಡಿ ಗಣೇಶೋತ್ಸವದಲ್ಲಿ ಗೋಸನ್ಮಾನ ಅಭಿಯಾನಕ್ಕೆ ಸಂಸದ ಬ್ರಿಜೇಶ್ ಚೌಟ ಚಾಲನೆ
ಉಪ್ಪಿನಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವದ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಉಪ್ಪಿನಂಗಡಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ಗೋಸನ್ಮಾನ ಅಭಿಯಾನ’ದ ಸಹಿ ಸಂಗ್ರಹಣಾ ಕಾರ್ಯಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಚಾಲನೆ ನೀಡಿದರು.
ಉತ್ಸವಕ್ಕೆ ಆಗಮಿಸಿದ ಸಂಸದರು ಶ್ರೀ ಮಹಾಗಣಪತಿಯ ದರ್ಶನ ಪಡೆದು, ಮಹಾಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದರು. ಬಳಿಕ ಗಣೇಶೋತ್ಸವ ಸಮಿತಿಯ ಪ್ರಮುಖರೊಂದಿಗೆ ಅಭಿಯಾನದ ಸಹಿ ಸಂಗ್ರಹಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಧಾರ್ಮಿಕ ಆಚರಣೆಗಳೊಂದಿಗೆ ಸನಾತನ ಸಂಸ್ಕೃತಿಯ ಪ್ರತೀಕವಾಗಿರುವ ಗೋವಂಶದ ರಕ್ಷಣೆ ಹಾಗೂ ಗೋಸೇವೆಯಂತಹ ಸತ್ಕಾರ್ಯಗಳಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಕೈಜೋಡಿಸುವ ಅಗತ್ಯವಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಗೋವಿನ ಮಹತ್ವ ಹಾಗೂ ಗೋಸಂರಕ್ಷಣೆಯ ಕುರಿತು ನಿರಂತರವಾಗಿ ಜನಜಾಗೃತಿ ಮೂಡಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೋಸನ್ಮಾನ ಅಭಿಯಾನ ಸಮಿತಿಯ ಸಹ ಪ್ರಭಾರಿ ಅಶೋಕ್ ಇಳಂತಿಲ, ವ್ಯವಸ್ಥಾ ಪ್ರಮುಖ ಹೇರಂಭ ಶಾಸ್ತ್ರಿ ಉಪ್ಪಿನಂಗಡಿ, ಉಪ್ಪಿನಂಗಡಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುನೀಲ್ ದಡ್ಡು, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರಮಜಲು, ಉಪಾಧ್ಯಕ್ಷ ವಿದ್ಯಾಧರ್ ಜೈನ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆದೇಶ್ ಶೆಟ್ಟಿ ಸೇರಿದಂತೆ ಉಪ್ಪಿನಂಗಡಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಬಿಜೆಪಿ ಮುಖಂಡರು, ವಿವಿಧ ಹಿಂದೂ ಹಾಗೂ ಧಾರ್ಮಿಕ ಸಂಘಟನೆಗಳ ಪ್ರಮುಖರು ಮತ್ತು ನೂರಾರು ಭಕ್ತರು ಉಪಸ್ಥಿತರಿದ್ದರು.













