ಕಾರ್ಮಿಕರ ಹಕ್ಕುಗಳಿಗಾಗಿ ಒತ್ತಾಯಿಸಿ ಜೆಸಿಟಿಯುನಿಂದ ಜೈಲ್ ಭರೋ: ಧರಣಿ ನಿರತರ ಬಂಧನ

Spread the love

ಕಾರ್ಮಿಕರ ಹಕ್ಕುಗಳಿಗಾಗಿ ಒತ್ತಾಯಿಸಿ ಜೆಸಿಟಿಯುನಿಂದ ಜೈಲ್ ಭರೋ: ಧರಣಿ ನಿರತರ ಬಂಧನ

ಮಂಗಳೂರು: ಕಾರ್ಮಿಕರಿಗೆ ಕಾನೂನುಬದ್ಧ ಕನಿಷ್ಠ ವೇತನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬಲವಂತದ ಭೂಸ್ವಾಧೀನವನ್ನು ತಕ್ಷಣವೇ ನಿಲ್ಲಿಸಬೇಕು. ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ಭೂಮಿ ಹಂಚಿಕೆ ಮಾಡುವುದನ್ನು ನಿಲ್ಲಿಸಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸಬೇಕು. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಮತ್ತು ಕಾರ್ಮಿಕರಿಗೆ ಸಮರ್ಪಕ ಕನಿಷ್ಠ ವೇತನ ಖಚಿತಪಡಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಕಾರ್ಮಿಕ ಸಂಘಟನೆ ಜಂಟಿ ಸಮಿತಿ ನೇತೃತ್ವದಲ್ಲಿ ಮಂಗಳೂರಿನಲ್ಲಿ ಜೈಲ್ ಭರೋ ನಡೆಯಿತು.

ಈ ವೇಳೆ ಮಾತನಾಡಿದ ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ , ಗ್ರಾಮೀಣ ಜನರ ಬದುಕಿಗೆ ಬಿಜೆಪಿ ಸರ್ಕಾರ ಚಪ್ಪಡಿ ಎಳೆದಿದೆ. ಕಾರ್ಪೊರೇಟ್ ಸಂಸ್ಥೆಗಳು ದೇಶ ಹಾಗೂ ರಾಜ್ಯದ ಸಂಪನ್ಮೂಲಗಳನ್ನು ಆಳುತ್ತಿವೆ. ಕಾರ್ಪೊರೇಟ್ ಸಂಸ್ಥೆಗಳು ಈ ದೇಶವನ್ನು ಬಿಟ್ಟು ತೊಲಗಬೇಕು. ಬಂಡವಾಳಗಾರರ ಹಿತ ಕಾಪಾಡುವುದರ ಬದಲು ರೈತರು ಮತ್ತು ಕೂಲಿಕಾರ್ಮಿಕರ ಹಿತವನ್ನು ರಕ್ಷಿಸಬೇಕು. ಕಾರ್ಮಿಕರ ಶೋಷಣೆಯಿಂದ ಮುಕ್ತಿ ಕಲ್ಪಿಸುವ ನಿಟ್ಟಿನಲ್ಲಿ ಹೋರಾಟವನ್ನು ಮುಂದುವರಿಸಲಾಗುವುದು. ಮುಂದಿನ ದಿನಗಳಲ್ಲಿ ದೆಹಲಿಯಲ್ಲಿಯೂ ಹೋರಾಟವನ್ನು ಮುಂದುವರಿಸಿ, ರೈತರು, ಕೂಲಿಕಾರ್ಮಿಕರು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿ ಎತ್ತಲಾಗುವುದು ಎಂದರು. ಕೇಂದ್ರ ಸರ್ಕಾರವು ತೆರಿಗೆ ಸಂಗ್ರಹದ ಬಹುಪಾಲನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ರಾಜ್ಯಗಳಿಗೆ ಸಮರ್ಪಕ ಪಾಲು ನೀಡುತ್ತಿಲ್ಲ. ಇದರಿಂದ ರಾಜ್ಯಕ್ಕೆ ಅಗತ್ಯ ಪ್ರಮಾಣದ ಅನುದಾನ ದೊರೆಯುತ್ತಿಲ್ಲ ಎಂದು ಅವರು ಆರೋಪಿಸಿದರು.ನರೇಗಾ ಅನುದಾನದ ಕೊರತೆಯಿಂದ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬಂಡವಾಳಶಾಹಿ ಸರ್ಕಾರದ ನೀತಿಗಳ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಹೇಳಿದರು.

ಮಂಗಳೂರು ಮಿನಿ ವಿಧಾನ ಸೌಧ ಎದುರು ಧರಣಿ ನಡೆಸಿ ರಸ್ತೆ ತಡೆ ಮಾಡಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.


Spread the love
Subscribe
Notify of

0 Comments