ಭಾರೀ ಮಳೆಗೆ ಮತ್ತೆ ಕುಸಿಯಲಾರಂಭಿಸಿದ ಕೆತ್ತಿಕಲ್ ಗುಡ್ಡ: ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಶುರುವಾಗಿದೆ ಆತಂಕ
ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ-169ರ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಮಂಗಳವಾರ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿಯಲಾರಂಭಿಸಿದ್ದು ಈ ಬೆಳರ್ವ ಗೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ತಿರುವೈಲು ಸರ್ಕಾರಿ ಶಾಲೆಯ ಸಮೀಪವಿರುವ ಕೆತ್ತಿಕಲ್ ಗುಡ್ಡದಿಂದ ಮಣ್ಣು ಹಾಗೂ ಬೃಹತ್ ಬಂಡೆಕಲ್ಲುಗಳು ಹೆದ್ದಾರಿಯತ್ತ ಜಾರಲಾರಂಭಿಸಿವೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಗುಡ್ಡದ ಮಣ್ಣು ಸಡಿಲಗೊಂಡಿದ್ದು, ಕುಸಿತದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ವ್ಯಕ್ತವಾಗಿದೆ.
ಈ ಪ್ರದೇಶದಲ್ಲಿ ಹೆದ್ದಾರಿ ಗುತ್ತಿಗೆ ಸಂಸ್ಥೆ ಕಳೆದ ಒಂದು ತಿಂಗಳಿನಿಂದ ಗುಡ್ಡದ ತಳಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಗುಡ್ಡದ ಸುರಕ್ಷತೆಗಾಗಿ ಈ ಕಾಮಗಾರಿ ಕೈಗೊಳ್ಳಲಾಗಿದ್ದರೂ, ಭಾರೀ ಮಳೆಯ ಸಂದರ್ಭದಲ್ಲಿ ಇಂತಹ ತಡೆಗೋಡೆಗಳು ಸಾಕಷ್ಟು ಪರಿಣಾಮಕಾರಿಯಾಗುವುದಿಲ್ಲ ಎಂಬ ಆತಂಕವನ್ನು ಸ್ಥಳೀಯರು ಮೊದಲಿನಿಂದಲೇ ವ್ಯಕ್ತಪಡಿಸಿದ್ದರು. ಇದೀಗ ನಡೆಯುತ್ತಿರುವ ಬೆಳವಣಿಗೆಗಳು ಅವರ ಆತಂಕಕ್ಕೆ ಪುಷ್ಟಿ ನೀಡುವಂತಿವೆ.
ಕಳೆದ ವರ್ಷವೂ ಇದೇ ಕೆತ್ತಿಕಲ್ ಪ್ರದೇಶದಲ್ಲಿ ಭಾರೀ ಗುಡ್ಡ ಕುಸಿತ ಸಂಭವಿಸಿತ್ತು. ಬಳಿಕ ಗುಡ್ಡವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿಮೆಂಟ್ ಹೊದಿಕೆ ಅಳ ಪಡಿಸಲಾಗಿತ್ತು. ಮಳೆ ನೀರು ಗುಡ್ಡದೊಳಗೆ ಸೇರುವುದನ್ನು ತಡೆಯಲು ನೂರಾರು ಡ್ರೈನೇಜ್ ಕೊಳವೆಗಳನ್ನು ಅಳವಡಿಸುವ ಕಾಮಗಾರಿಯೂ ನಡೆದಿತ್ತು. ಆದರೆ ಕಳೆದ ವರ್ಷದ ಭಾರೀ ಮಳೆಯ ಅಬ್ಬರಕ್ಕೆ ಆ ರಕ್ಷಣಾ ವ್ಯವಸ್ಥೆಯ ಬಹುಪಾಲು ಹಾನಿಗೊಳಗಾಗಿತ್ತು. ಈ ಬಾರಿ ಗುಡ್ಡ ಕುಸಿದಿರುವ ಭಾಗದಲ್ಲಿ ಹೆದ್ದಾರಿ ಮತ್ತು ಗುಡ್ಡದ ಮಧ್ಯೆ ಹೊಸ ತಡೆಗೋಡೆ ನಿರ್ಮಿಸಲಾಗುತ್ತಿದೆ. ಆದರೆ ತಜ್ಞರ ಪ್ರಕಾರ, ಅಡಿಪಾಯ ಆಳವಾಗಿರದ ಕಾರಣ ಭಾರೀ ಮಳೆಯ ಸಂದರ್ಭದಲ್ಲಿ ಕೆಳಭಾಗದ ಮಣ್ಣು ಸಡಿಲಗೊಂಡರೆ ಮೇಲ್ಬಾಗದಲ್ಲಿರುವ ಬಂಡೆಗಳು ಸುಲಭವಾಗಿ ಜಾರುವ ಅಪಾಯವಿದೆ.
ಪ್ರಸ್ತುತ ಗುಡ್ಡದ ಮೇಲ್ಬಾಗದಲ್ಲಿ ಇನ್ನೂ ಹಲವು ಬೃಹತ್ ಬಂಡೆಗಳು ಹಾಗೂ ದೊಡ್ಡ ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ಇರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ತೀವ್ರಗೊಂಡರೆ ಅವು ಕುಸಿದು ಹೆದ್ದಾರಿಗೆ ಬೀಳುವ ಸಾಧ್ಯತೆ ಇರುವುದರಿಂದ ಸಂಚಾರಕ್ಕೆ ದೊಡ್ಡ ಅಪಾಯ ಎದುರಾಗುವ ಭೀತಿ ವ್ಯಕ್ತವಾಗಿದೆ.
ಕಳೆದ ವರ್ಷದ ಗುಡ್ಡ ಕುಸಿತದ ನಂತರ ಈ ಭಾಗದಲ್ಲಿ ಚತುಷ್ಪಥ ಹೆದ್ದಾರಿಯ ಬದಲಿಗೆ ಎರಡು ಪಥಗಳಲ್ಲಿ ಮಾತ್ರ ವಾಹನ ಸಂಚಾರ ನಡೆಯುತ್ತಿದೆ. ಇದೀಗ ಮತ್ತೆ ಗುಡ್ಡ ಕುಸಿತ ಆರಂಭವಾಗಿರುವುದರಿಂದ ಹೆದ್ದಾರಿಯ ಸುರಕ್ಷತೆ ಪ್ರಶ್ನಾರ್ಥಕವಾಗಿದ್ದು, ತಕ್ಷಣ ಶಾಶ್ವತ ತಡೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.













