ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಕರಾವಳಿ ಪ್ರದೇಶದ ಜನರ ಬೇಡಿಕೆಗಳಿಗೆ ಹೆಚ್ಚಿನ ಆದ್ಯತೆ : ಯು.ಟಿ.ಖಾದರ್
ಮಂಗಳೂರು : ಸಚಿವ ಸಂಪುಟ ಸಭೆ ಪ್ರಥಮ ಬಾರಿಗೆ ಸೆ.18ರಂದು ಮಂಗಳೂರಿನಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯ ಬಗ್ಗೆ ಮತ್ತು ಮುಖ್ಯವಾಗಿ ಕರಾವಳಿಯ ಜನರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಪ್ರಮುಖ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಅವರು ಇಂದು ಸೆ.18ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಪ್ರಜಾಸೌಧದಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟದ ತಯಾರಿಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡುತ್ತಾ, ರಾಜ್ಯ ಸಚಿವ ಸಂಪುಟ ಸಭೆ ಬೆಂಗಳೂರು ಹೊರತಾಗಿ ಬೇರೆ ಕಡೆ ನಡೆಸುವ ಉದ್ದೇಶ ಹೊಂದಿದ್ದಲ್ಲಿ ಪ್ರಥಮವಾಗಿ ಮಂಗಳೂರಿನಲ್ಲಿ ನಡೆಸುವಂತೆ ನಾನೇ ಪ್ರಸ್ತಾಪ ಮಾಡಿದ್ದೆ, ಈಗ ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಸಲು ರಾಜ್ಯದ ಮುಖ್ಯಮಂತ್ರಿಯವರು ತೆಗೆದುಕೊಂಡ ತೀರ್ಮಾನದಿಂದ ಸಂತೋಷವಾಗಿದೆ. ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ, ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಈ ಸಂಪುಟ ಸಭೆಯಲ್ಲಿ ಗಮನಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಭಟನೆ ಕೈ ಬಿಡಲು ಮನವಿ : ಕರಾವಳಿ ಜಿಲ್ಲೆಗಳ ಸಮಸ್ಯೆ ಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಗಮನಹರಿಸಲಾಗುವುದು. ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸಂದರ್ಭದಲ್ಲಿ ಜಿಲ್ಲೆಯ ಜನತೆಯ ಸಹಕಾರ ಅಗತ್ಯ. ಜೈಲು ಜಾಮರ್ ಬಹಳ ಹಿಂದಿನ ಸಮಸ್ಯೆ. ಜೈಲನ್ನು ಈ ಪ್ರದೇಶದಿಂದ ಸ್ಥಳಾಂತರದ ಬಗ್ಗೆ ಸರಕಾರ ತೀರ್ಮಾನಿಸಿದೆ. ಈ ಬಗ್ಗೆ ಸಚಿವ ಸಂಪುಟದ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವ ಬದಲು ಮುಂದಿನ ಶಾಶ್ವತ ಯೋಜನೆಯ ಬಗ್ಗೆ ಮುಂದಿನ ಬಜೆಟ್ ನಲ್ಲಿ ಹಣ ನಿಗದಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.













