ಕಲ್ಮಾಡಿ ಚರ್ಚ್: ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವದ ನವದಿನಗಳ ನೊವೆನಾ ಪ್ರಾರ್ಥನೆಗೆ ಚಾಲನೆ

Spread the love

ಕಲ್ಮಾಡಿ ಚರ್ಚ್: ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವದ ನವದಿನಗಳ ನೊವೆನಾ ಪ್ರಾರ್ಥನೆಗೆ ಚಾಲನೆ

ಮಲ್ಪೆ: ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.

‘ಆತ ಹೇಳಿದಂತೆ ಮಾಡಿ’ಹಬ್ಬದ ಸಂದೇಶವಾಗಿದ್ದು, ಪೂರ್ವ ಸಿದ್ದತೆಯಾಗಿ 9 ದಿನಗಳ ನವೇನಾ ಪ್ರಾರ್ಥನೆಗೆ ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಧ್ವಜಾರೋಹಣದ ಮೂಲಕ ಚಾಲನೆ ನೀಡಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.

ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಪ್ರವಚನದಲ್ಲಿ ಸಂದೇಶವನ್ನು ನೀಡಿ ಕ್ರೈಸ್ತ ವಿಶ್ವಾಸಿಗಳು ತಮ್ಮ ಉತ್ತಮ ನಡೆ, ಪ್ರೀತಿ, ಮತ್ತು ಸಹಾಯದ ಹಸ್ತದ ಮೂಲಕ ಕ್ರಿಸ್ತನ ಬೆಳಕನ್ನು ಜಗತ್ತಿಗೆ ತೋರಿಸಬೇಕಾಗಿದೆ. ಕ್ರೈಸ್ತ ನಂಬಿಕೆಯಲ್ಲಿ ಶಿಲುಬೆಯು ಮಾನವ ಜೀವನದ ಕೊನೆಯಲ್ಲ, ಬದಲಿಗೆ ಹೊಸ ಜೀವನದ ಮತ್ತು ಪುನರುತ್ಥಾನದ ಆರಂಭವಾಗಿದೆ. ಶಿಲುಬೆಯು ಯೇಸುಕ್ರಿಸ್ತನ ತ್ಯಾಗ, ಕ್ಷಮೆ ಮತ್ತು ಅನಾದಿ ಪ್ರೀತಿಯ ಸಂಕೇತವಾಗಿದೆ. ಇದು ಕಷ್ಟಗಳ ಅಂತ್ಯವಲ್ಲ, ಬದಲಿಗೆ ನಂಬಿಕೆಯ ಹೊಸ ದಾರಿಯಾಗಿದೆ ಎಂದರು.

ಪ್ರತಿನಿತ್ಯ ದೇವರ ವಾಕ್ಯವನ್ನು ಓದುವುದರ ಮೂಲಕ ದೇವರೊಂದಿಗೆ ಸಂವಹನ ನಡೆಸಲು ಇರುವ ಪ್ರಮುಖ ಮಾರ್ಗವಾಗಿದೆ. ನಾವು ಬೈಬಲ್ ಓದುವಾಗ ದೇವರು ನಮ್ಮೊಂದಿಗೆ ಮಾತನಾಡುತ್ತಾನೆ ಮತ್ತು ನಾವು ಪ್ರಾರ್ಥನೆಯ ಮೂಲಕ ದೇವರೊಂದಿಗೆ ಮಾತನಾಡುತ್ತೇವೆ. ಮೇರಿ ಮಾತೆ ಯೇಸು ಸ್ವಾಮಿಯ ಮೂಲಕ ದೇವರ ಕೆಲಸಗಳನ್ನು ಕಾರ್ಯರೂಪಗೊಳಿಸಿದ್ದು ಅವರ ಜೀವನದ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗೋಣ ಎಂದರು.

ಪವಿತ್ರ ಬಲಿಪೂಜೆಯಲ್ಲಿ ವೇಳೆ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ರೆಕ್ಟರ್ ವಂ.ಡಾ.ಬ್ಯಾಪ್ಟಿಸ್ಟ್ ಮಿನೇಜಸ್, ಬ್ರಹ್ಮಾವರ ಚರ್ಚಿನ ಧರ್ಮಗುರು ವಂ| ಜೋನ್ ಫೆರ್ನಾಂಡಿಸ್, ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷರಾದ ನವೀನ್ ಫೆರ್ನಾಂಡಿಸ್, ಕಾರ್ಯದರ್ಶಿ ಪ್ರೆಸಿಲ್ಲಾ ಆಳ್ವಾ, ಆಯೋಗಗಳ ಸಂಯೋಜಕರಾದ ಡೆನಿಸ್ ಲಸ್ರಾದೊ ಹಾಗೂ ಚರ್ಚಿನ ಮಹೋತ್ಸವ ಆಚರಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

9ದಿನಗಳ ನವೇನಾ ಪ್ರಾರ್ಥನೆಯಲ್ಲಿ ಭಕ್ತಾದಿಗಳಿಗಾಗಿ, ದಂಪತಿಗಳಿಗಾಗಿ, ದಾನಿಗಳಿಗಾಗಿ, ಯುವಜನರಿಗಾಗಿ, ಯಾಜಕರು ಮತ್ತು ಧಾರ್ಮಿಕರಿಗಾಗಿ, ವಯೋವೃದ್ಧರಿಗಾಗಿ, ರೋಗಿಗಳಿಗಾಗಿ, ಕುಟುಂಬಗಳಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ.

ಆಗಸ್ಟ್ 13 ರಂದು ಗುರುವಾರ ಮಧ್ಯಾಹ್ನ 2.54 ಕ್ಕೆ ಆದಿ ಉಡುಪಿ ಜಂಕ್ಷನ್ ನಿಂದ ಚರ್ಚಿನ ತನಕ ವೆಲಂಕಣಿ ಮಾತೆಯ ಸ್ವರೂಪದ ಮೆರವಣಿಗೆ ನಡೆಯಲಿದ್ದು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರು ವಂ|ಫ್ರಾಂಕ್ಲಿನ್ ಡಿಸೋಜಾ ಚಾಲನೆ ನೀಡಲಿದ್ದಾರೆ.

ಆಗಸ್ಟ್ 15 ರ ಬೆಳಗ್ಗೆ 10.30 ಕ್ಕೆ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ನೆರೆವೇರಿಸುವರು. ಉಡುಪಿ ಧರ್ಮಪ್ರಾಂತದ ಅನೇಕ ಧರ್ಮ ಗುರುಗಳು ಹಾಗೂ ಸಾವಿರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವರು.


Spread the love
Subscribe
Notify of

0 Comments