ಕರಾವಳಿ ಅಭಿವೃದ್ಧಿ ಯೋಜನೆಗಳಲ್ಲಿ ಸ್ಥಳೀಯರ ಹಿತಾಸಕ್ತಿ, ಸಂಸ್ಕೃತಿ ಹಾಗೂ ಭದ್ರತೆಗೆ ಆದ್ಯತೆ ನೀಡಿ: ವಿಹಿಂಪ
ಮಂಗಳೂರು: ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿಯ ಅಭಿವೃದ್ಧಿಗೆ ವಿಶೇಷ ಪ್ರವಾಸೋದ್ಯಮ ಪ್ಯಾಕೇಜ್ ಹಾಗೂ ಐಟಿ-ಬಿಟಿ ಉದ್ಯಮಗಳ ಉತ್ತೇಜನ ಕುರಿತು ಚರ್ಚೆಯಾಗುತ್ತಿರುವುದನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿದೆ.
ಆರ್ಥಿಕ ಪ್ರಗತಿ ಹಾಗೂ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ಅಗತ್ಯವಾಗಿದ್ದು, ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ತುಳುನಾಡಿನ ಮೂಲ ಸಂಸ್ಕೃತಿ, ಧಾರ್ಮಿಕ ಆಚರಣೆಗಳು, ರಾಷ್ಟ್ರೀಯ ಭದ್ರತೆ ಹಾಗೂ ಸ್ಥಳೀಯರ ಹಿತಾಸಕ್ತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಆಗ್ರಹಿಸಿದ್ದಾರೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರಾವಳಿಯ ದೈವಾರಾಧನೆ, ಕೋಲ-ನೇಮ, ಕಂಬಳ, ಯಕ್ಷಗಾನ ಹಾಗೂ ಸಾಂಪ್ರದಾಯಿಕ ನಾಟಕಗಳನ್ನು ವಿಶೇಷ ಸಾಂಸ್ಕೃತಿಕ ಪರಂಪರೆಯಾಗಿ ವರ್ಗೀಕರಿಸಿ, ಇಡೀ ರಾತ್ರಿ ನಡೆಯುವ ಇಂತಹ ಆಚರಣೆಗಳಿಗೆ ಧ್ವನಿವರ್ಧಕ ನಿಯಮಗಳಿಂದ ವಿನಾಯಿತಿ ನೀಡಬೇಕು. ಅಲ್ಲದೆ, ಕಾರ್ಯಕ್ರಮಗಳ ಆಯೋಜಕರಿಗೆ ಪೊಲೀಸ್ ಹಾಗೂ ಸ್ಥಳೀಯ ಆಡಳಿತದಿಂದ ಸುಲಭವಾಗಿ ಅನುಮತಿ ದೊರೆಯುವಂತೆ ಸರಳೀಕೃತ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
2500ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ ಎಂದು ವಿಹಿಂಪ ಉಲ್ಲೇಖಿಸಿರುವ ತುಳು ಭಾಷೆಗೆ ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕು ಹಾಗೂ ಸಂವಿಧಾನದ ಎಂಟನೇ ಅನುಸೂಚಿಗೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಕರಾವಳಿಯ ಯುವಕರ ವಲಸೆ ತಡೆಯುವ ನಿಟ್ಟಿನಲ್ಲಿ ಐಟಿ-ಬಿಟಿ, ಬಂದರು ಆಧಾರಿತ ಉದ್ಯಮಗಳು ಹಾಗೂ ಪ್ರವಾಸೋದ್ಯಮ ಯೋಜನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಬೇಕು. ಈ ಕ್ಷೇತ್ರಗಳಲ್ಲಿ ಶೇ.70ರಿಂದ 80ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಕಾಯ್ದಿರಿಸಬೇಕು ಎಂಬ ಬೇಡಿಕೆಯನ್ನು ಕೂಡ ಮುಂದಿಡಲಾಗಿದೆ.
ಕರಾವಳಿಯ ಭದ್ರತೆಯ ದೃಷ್ಟಿಯಿಂದ ಮಂಗಳೂರಿನಲ್ಲಿ ಶಾಶ್ವತ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಘಟಕ ಹಾಗೂ ವಿಶೇಷ ಕರಾವಳಿ ಭದ್ರತಾ ಪಡೆ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ವಿಹಿಂಪ ಮನವಿ ಮಾಡಿದೆ.
ಅದೇ ರೀತಿ ಧಾರ್ಮಿಕ ಹಾಗೂ ಕೌಟುಂಬಿಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ಗೋವಾ ಮಾದರಿಯ ಜೂಜು, ಕ್ಯಾಸಿನೋ ಹಾಗೂ ನೈಟ್ಲೈಫ್ಗಳಿಗೆ ಅವಕಾಶ ನೀಡಬಾರದು. ಮಂಗಳೂರಿನಲ್ಲಿ ಮಾದಕ ದ್ರವ್ಯ ಜಾಲ ಹಾಗೂ ಪಬ್-ಕ್ಲಬ್ ಸಂಸ್ಕೃತಿಯ ದುರ್ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಗೋಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ಗಡಿ ಚೆಕ್ಪೋಸ್ಟ್ಗಳನ್ನು ಬಲಪಡಿಸುವುದು ಹಾಗೂ ಅಕ್ರಮ ಗೋಸಾಗಾಟ ಮತ್ತು ಕಸಾಯಿಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನೂ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ತುಳುನಾಡಿನ ಮೂಲ ಸಂಸ್ಕೃತಿ, ಭದ್ರತೆ ಹಾಗೂ ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಬೇಡಿಕೆಗಳನ್ನು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಗಂಭೀರವಾಗಿ ಪರಿಗಣಿಸಿ, ಸೆಪ್ಟೆಂಬರ್ 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಶರಣ್ ಪಂಪುವೆಲ್ ಆಗ್ರಹಿಸಿದ್ದಾರೆ.













