ಬಿಜೆಪಿ ವಂದೇಮಾತರಂ ಹಾಡನ್ನು ಇಟ್ಟುಕೊಂಡು ಚುನಾವಣಾ ರಾಜಕೀಯ ಮಾಡುತ್ತಿದೆ : ಯು ಟಿ ಖಾದರ್

Spread the love

ಬಿಜೆಪಿ ವಂದೇಮಾತರಂ ಹಾಡನ್ನು ಇಟ್ಟುಕೊಂಡು ಚುನಾವಣಾ ರಾಜಕೀಯ ಮಾಡುತ್ತಿದೆ : ಯು ಟಿ ಖಾದರ್

ಮಂಗಳೂರು: ರಾಜ್ಯದಲ್ಲಿ ಯಾವ ಹಾಡು ಹಾಡಬೇಕು, ಎಷ್ಟು ಭಾಗ ಹಾಡಬೇಕು ಎಂಬುದನ್ನು ರಾಜ್ಯ ಸರ್ಕಾರವೇ ತೀರ್ಮಾನಿಸಲಿದೆ. ವಂದೇ ಮಾತರಂ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣಾ ರಾಜಕೀಯ ಮಾಡುತ್ತಿದೆ. ಬಿಜೆಪಿಯ ಈ ಹಿಡನ್ ಅಜೆಂಡಾಕ್ಕೆ ರಾಜ್ಯದಲ್ಲಿ ಅವಕಾಶವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಈಗ ದೇಶಪ್ರೇಮ ಉಕ್ಕಿ ಹರಿಯುತ್ತಿರುವುದೇಕೆ? ಹಿಂದೆ ಬಿಜೆಪಿ ಬೆಂಬಲದಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ, ವಾಜಪೇಯಿ ಹಾಗೂ ನರೇಂದ್ರ ಮೋದಿ 14 ವರ್ಷಗಳ ಕಾಲ ಪ್ರಧಾನಿ ಆಗಿದ್ದಾಗ ನೆನಪಾಗದ ವಂದೇ ಮಾತರಂ ಬಗೆಗಿನ ರಾಷ್ಟ್ರಭಕ್ತಿ ಪಶ್ಚಿಮ ಬಂಗಾಲ ಚುನಾವಣೆ ವೇಳೆ ಏಕಾಏಕಿ ಯಾಕೆ ನೆನಪಾಗಿದೆ. ನೈಜ ದೇಶಭಕ್ತಿ ಇದ್ದಿದ್ದರೆ ಬಿಜೆಪಿ ಹಿಂದೆ ಅಧಿಕಾರದಲ್ಲಿ ಇರುವಾಗಲೇ ವಂದೇ ಮಾತರಂನನ್ನು ಜಾರಿಗೆ ತರುತ್ತಿತ್ತು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ಹಿಂದೆ ಇದ್ದಂತೆ ಎರಡು ಚರಣ ವಂದೇ ಮಾತರಂ ಹಾಡುವುದನ್ನು ಮುಂದುವರಿಸಿದೆ. ಪ್ರಮಾಣ ವಚನ ಸಮಾರಂಭದಲ್ಲಿ ಪೂರ್ತಿ ವಂದೇ ಮಾತರಂ ಹಾಡಲಾಗಿದೆ. ನಾವೇನು ವಂದೇ ಮಾತರಂ ವಿರೋಧಿಗಳು ಅಲ್ಲ. ವಂದೇ ಮಾತರಂ ಚರಣ ವಿಚಾರದಲ್ಲಿ ಆಗಾಗ ಏರಿಳಿತ ಆಗಬಾರದು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಕೇವಲ ಎರಡು ಚರಣಕ್ಕೆ ಇಳಿಸಿದೆ. ಒಂದು ವೇಳೆ ರಾಜ್ಯ ಸರ್ಕಾರ ಪೂರ್ಣ ವಂದೇ ಮಾತರಂ ಹಾಡುವಂತೆ ಸೂಚಿಸಿದರೆ ಪೂರ್ಣಗೀತೆಯನ್ನೇ ಹಾಡುತ್ತೇವೆ. ವಂದೇ ಮಾತರಂನ ಪೂರ್ಣಗೀತೆ ಬಹಳ ಚೆನ್ನಾಗಿದೆ ಎಂದರು.

ಕೋಲಾರದಲ್ಲಿ ಸಿಂಥಟಿಕ್ ಅಡಿಕೆ ಸಾಗಿಸುತ್ತಿದ್ದ ಟ್ರಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದ್ದು, ತನಿಖೆಯ ಬಳಿಕ ಸಿಂಥಟಿಕ್ ಅಡಕೆ ಕುರಿತು ಸಂಪೂರ್ಣ ಮಾಹಿತಿ ಹೊರಬರಲಿದೆ ಎಂದು ಖಾದರ್ ಹೇಳಿದರು.

ಬಾಂಗ್ಲಾದೇಶ, ನೇಪಾಳ ಸೇರಿದಂತೆ ವಿವಿಧೆಡೆಯಿಂದ ಅಡಕೆ ಬರುತ್ತಿದೆ. ಗುಟ್ಕಾ ನಿಷೇಧಿಸಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಆದರೆ ಅಡಕೆಯನ್ನು ನಿಷೇಧಿಸಿದರೆ ಅಡಕೆ ಬೆಳೆಗಾರರಿಗೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಎಲ್ಲೆಲ್ಲಿಂದಲೋ ಇಂತಹ ಅಡಕೆ ಬರುತ್ತಿರುವುದನ್ನು ಗಮನಿಸಬೇಕಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿಯೇ ಗುಟ್ಕಾ ನಿಷೇಧಕ್ಕೆ ಒತ್ತು ನೀಡಲಾಗಿತ್ತು ಎಂದರು.

ನಕಲಿ ಔಷಧ ಮಾರಾಟ ಪ್ರಕರಣ ಪತ್ತೆ ಕುರಿತಂತೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ನಡೆಸುತ್ತಿದೆ. ಈಗಿನ ನಿಯಮದಲ್ಲಿ ನಕಲಿ ಪತ್ತೆ ಸಾಬೀತಾದರೆ ಔಷಧ ಸಂಸ್ಥೆ ಬಂದ್ ಹಾಗೂ ದಂಡ ವಿಧಿಸಲು ಅಷ್ಟೇ ಅವಕಾಶ ಇದೆ. ಇದನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಿ ಕ್ರಿಮಿನಲ್ ಅಪರಾಧ ಎಂದು ತೀರ್ಮಾನಿಸಬೇಕಾಗಿದೆ. ಆಗ ಮಾತ್ರ ಇಂತಹ ದಂಧೆಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ. ಇದು ಐದು ಕೋಟಿ ರು.ಗೂ ಮಿಕ್ಕಿದ ನಕಲಿ ಔಷಧ ಮಾರಾಟ ಪ್ರಕರಣವಾದ್ದರಿಂದ ಸಿಬಿಐ ತನಿಖೆಗೂ ಅವಕಾಶ ಇದೆ. ಈಗಾಗಲೇ ನಕಲಿ ಔಷಧ ಮಾರಾಟ ತಡೆಗೆ ಸರ್ಕಾರವೂ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಆಹ್ವಾನ ನೀಡದ ವಿಚಾರವಾಗಿ ಶಾಸಕ ರಾಜಣ್ಣ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖಾದರ್, ನನಗೆ ಆಹ್ವಾನ ನೀಡಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಅವರು ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದರು.

ಅವರು ಆಹ್ವಾನ ನೀಡಿಲ್ಲ ಎಂದು ಹೇಳಿಲ್ಲ ಎಂದಾದರೆ, ಆಹ್ವಾನ ನೀಡಲಾಗಿದೆ ಎಂದೇ ಅರ್ಥ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಖ್ಯಮಂತ್ರಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರು ಸೇರಿದಂತೆ ಎಲ್ಲರೂ ಒಟ್ಟಾಗಿಯೇ ಇದ್ದಾರೆ ಎಂದು ಸಚಿವ ಖಾದರ್ ಹೇಳಿದರು.

ಮಂಗಳೂರಿನಲ್ಲಿ ಸೆ. 18 ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದ.ಕ. ಕರಾವಳಿಯ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ಸಿಗಲಿದೆ. ಕ್ಯಾಬಿನೆಟ್ ಮೀಟಿಂಗ್ ಎಂದರೆ, ಅದರಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಯುತ್ತದೆ. ಮುಖ್ಯವಾಗಿ ಮಾನವ ಸಂಪನ್ಮೂಲಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕರಾವಳಿಯಲ್ಲಿ ವಾಟರ್ ಟೂರಿಸಂ ಬಗ್ಗೆ ರೋಡ್ ಮ್ಯಾಪ್ ಮಾಡಲು ಸೂಚನೆ ನೀಡುವ ಸಾಧ್ಯತೆ ಇದೆ. ಕರಾವಳಿ ಪ್ರವಾಸೋದ್ಯಮದ ಬಗ್ಗೆ ಹೆಚ್ಚಿನ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ರೂಪುರೇಷೆ ಕೈಗೊಳ್ಳುವ ಸಂಭವ ಇದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆ್ಯಕ್ಷನ್ ಪ್ಲ್ಯಾನ್ ಸಿದ್ಧಗೊಳಿಸಲು ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡಂತೆ ಸಲಹೆ ಸೂಚನೆ ಪಡೆಯಲಾಗುವುದು ಎಂದರು.

ಕರ್ನಾಟಕದಲ್ಲಿ ರಾಜ್ಯ ಭಾಷೆಯಾಗಿ ತುಳುವಿಗೆ ಎರಡನೇ ಸ್ಥಾನಮಾನ ನೀಡುವ ವಿಚಾರ ಸರ್ಕಾರದಿಂದ ತೀರ್ಮಾನವಾಗಬೇಕಾಗಿದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಕ್ಯಾಬಿನೆಟ್‌ನಲ್ಲಿ ಪ್ರಸ್ತಾಪಗೊಳ್ಳುವ ವಿಶ್ವಾಸ ಇದೆ ಎಂದರು.


Spread the love
Subscribe
Notify of

0 Comments