ತುಳು ಭಾಷೆಗೆ ಅಧಿಕೃತ ಮಾನ್ಯತೆ : ಐತಿಹಾಸಿಕ ಕ್ರಮ ; ತಾರಾನಾಥ ಗಟ್ಟಿ ಕಾಪಿಕಾಡ್
ಮಂಗಳೂರು: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯೆಂದು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ನಿರ್ಧಾರ ಪ್ರಕಟಿಸಿದ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ಸಚಿವ ಸಂಪುಟದ ಎಲ್ಲಾ ಮಂತ್ರಿಗಳಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಕಾಡೆಮಿಯ ಪರವಾಗಿ ಧನ್ಯವಾದವನ್ನು ಸಲ್ಲಿಸಿರುತ್ತಾರೆ.
ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ತುಳು ಭಾಷೆಗೆ ಅಧಿಕೃತ ಮಾನ್ಯತೆಯನ್ನು ನೀಡುವ ಮೂಲಕ ಸರಕಾರ ನುಡಿದಂತೆ ನಡೆದಿದೆ ಎಂದು ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಸಂತಸ ವ್ಯಕ್ತಪಡಿಸಿದ್ದಾರೆ.
ತುಳು ಭಾಷೆಗೆ ಅಧಿಕೃತ ಮಾನ್ಯತೆ ಲಭಿಸುವ ನಿಟ್ಟಿನಲ್ಲಿ ತುಳುವರ ಪರವಾಗಿ ಕಾಳಜಿ ವಹಿಸಿದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಚಿವರಾದ ಶಿವರಾಜ್. ಎಸ್. ತಂಗಡಗಿ ಅವರಿಗೆ, ಸರಕಾರದ ಮುಂದೆ ವಿಷಯವನ್ನು ನಿರಂತರವಾಗಿ ಮಂಡಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್, ಪುತ್ತೂರಿನ ಶಾಸಕರಾದ ಅಶೋಕ್ ರೈ ಹಾಗೂ ಕರಾವಳಿಯ ಎಲ್ಲಾ ಶಾಸಕರನ್ನು ಮತ್ತು ಸರಕಾರದ ಮೇಲೆ ಒತ್ತಾಯ, ಆಗ್ರಹಗಳನ್ನು ನಿರಂತರವಾಗಿ ತಂದ ದೇಶ ವಿದೇಶದ ಎಲ್ಲಾ ತುಳು ಸಂಘ ಸಂಸ್ಥೆಗಳಿಗೂ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಅಭಿನಂದನೆ ಸಲ್ಲಿಸಿರುತ್ತಾರೆ.
ಸಮಸ್ತ ತುಳುವರಿಗೆ ಇದೊಂದು ಚಾರಿತ್ರಿಕ ದಿನವಾಗಿದ್ದು ಜಗತ್ತಿನಾದ್ಯಂತ ನೆಲೆಸಿರುವ ತುಳು ಭಾಷಿಗರಲ್ಲಿ ಆತ್ಮ ವಿಶ್ಮಾಸವನ್ನು ಪುಟಿದೆಬ್ಬಿಸಿದ ದಿನವಾಗಿದೆ. ತುಳು ಭಾಷೆಯ ಸಮಗ್ರ ಬೆಳವಣಿಗೆಯ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಕ್ರಮವಾಗಿದೆ. ಸುಮಾರು 3 ಸಾವಿರ ವರ್ಷಗಳ ಚಾರಿತ್ರಿಕ ಹಿನ್ನಲೆಯನ್ನು ಹೊಂದಿರುವ ತುಳು ಭಾಷೆಗೆ ಒದಗಿದ ಮಹತ್ವದ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದಿನ ಸರಕಾರದ ಅವಧಿಯಲ್ಲಿ ಡಾ.ಎಂ. ಮೋಹನ್ ಆಳ್ವ ಅವರು ಸಲ್ಲಿಸಿರುವ ವರದಿಯ ಬಳಿಕ ಮಾನ್ಯ ಸಿದ್ದರಾಮಯ್ಯ ಸರಕಾರವು ರಚಿಸಿದ ಆಂಧ್ರ ಪ್ರದೇಶದ ಅಧ್ಯಯನ ವರದಿಯ ಹಿನ್ನಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ದಿಟ್ಟ ನಿರ್ಧಾರ ಕೈಗೊಂಡು ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮಾನ್ಯತೆ ನೀಡುವ ಮೂಲಕ ಐತಿಹಾಸಿಕ ಕ್ರಮ ಕೈಗೊಂಡಿರುವುದು ಸಮಸ್ತ ತುಳುವರಿಗೆ ಹೆಮ್ಮೆಯ ವಿಚಾರವಾಗಿರುತ್ತದೆ ಎಂದು ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಸರಕಾರ ನೇಮಿಸಿದ ಆಂಧ್ರ ಪ್ರದೇಶ ಅಧ್ಯಯನ ಸಮಿತಿಯ ಸದಸ್ಯನಾಗಿ ಆಂಧ್ರ ಪ್ರದೇಶದಲ್ಲಿ ಉರ್ದು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿರುವ ವಿಧಿ ವಿಧಾನ ಹಾಗೂ ಕಾನೂನು ಪ್ರಕ್ರಿಯೆಗಳ ಮಾಹಿತಿಯನ್ನು ವರದಿಯ ಮೂಲಕ ಸರಕಾರಕ್ಕೆ ಸಲ್ಲಿಸುವ ಸೇವೆಗೈಯಲು ಅವಕಾಶವಾಯಿತು ಹಾಗೂ ಆಂಧ್ರ ಪ್ರದೇಶ ಅಧ್ಯಯನ ವರದಿಯು ತುಳುವನ್ನು ಅಧಿಕೃತ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರಕ್ಕೆ ಮಹತ್ವದ ದಾಖಲೆಗಳನ್ನು ಹಾಗೂ ನಿರೂಪಣೆಗಳನ್ನು ಒದಗಿಸಿಕೊಟ್ಟಿತ್ತು ಎಂಬುದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಸಂವಿಧಾನದ 8 ನೇ ಪರಿಚ್ಚೇದಕ್ಕೆ ತುಳು ಸೇರ್ಪಡೆಯಾಗಬೇಕೆಂಬ ತುಳುವರ ಮಹತ್ವದ ಇನ್ನೊಂದು ಬೇಡಿಕೆ ಈಡೇರುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಇಂದಿನ ಈ ಚಾರಿತ್ರಿಕ ನಿರ್ಧಾರವು ಪೂರಕ ಬಲವನ್ನು ತಂದುಕೊಟ್ಟಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಅಭಿಪ್ರಾಯಪಟ್ಟಿದ್ದಾರೆ.













