ಅನುಮತಿ ಇಲ್ಲದೆ ಬೃಹತ್ ಯಂತ್ರೋಪಕರಣ ಸಾಗಾಟ: ಟ್ರೇಲರ್ ಚಾಲಕ ಸೇರಿ ಮೂವರ ವಿರುದ್ಧ ಪ್ರಕರಣ

Spread the love

ಅನುಮತಿ ಇಲ್ಲದೆ ಬೃಹತ್ ಯಂತ್ರೋಪಕರಣ ಸಾಗಾಟ: ಟ್ರೇಲರ್ ಚಾಲಕ ಸೇರಿ ಮೂವರ ವಿರುದ್ಧ ಪ್ರಕರಣ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ-66ರ ಮಂಗಳೂರು–ಉಡುಪಿ ರಸ್ತೆಯ ಡಿಕ್ಸಿ ಕ್ರಾಸ್ ಸಮೀಪ ಬೃಹತ್ ಗಾತ್ರದ ಟ್ರೇಲರ್ ವಾಹನ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸುಮಾರು ಒಂದು ಗಂಟೆಗೂ ಅಧಿಕ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆಗೆ ಸಂಬಂಧಿಸಿದಂತೆ ಟ್ರೇಲರ್ ಚಾಲಕ, ಸಾರಿಗೆ ಸಂಸ್ಥೆಯ ಮಾಲೀಕ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 5ರಂದು ಸಂಜೆ ಸುಮಾರು 4.45ರ ವೇಳೆಗೆ ಪಣಂಬೂರು ಬೀಚ್ ಕಡೆಯಿಂದ ಬಂದ GJ-06-BX-0086 (Puller) ಹಾಗೂ GJ-12-BZ-2722 (Axle) ನೋಂದಣಿ ಸಂಖ್ಯೆಯ ಬೃಹತ್ ಟ್ರೇಲರ್ ವಾಹನವನ್ನು ಚಾಲಕ ವಿನೋದ್ ಕುಮಾರ್ ಸಿಂಗ್ ನಿರ್ಲಕ್ಷ್ಯ ಹಾಗೂ ದುಡುಕುತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿದ ಪರಿಣಾಮ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.
ಪ್ರಾಥಮಿಕ ತನಿಖೆಯಲ್ಲಿ, ಬೃಹತ್ ಟ್ರೇಲರ್ ವಾಹನವು ರಸ್ತೆ ಸಂಚಾರಕ್ಕೆ ಅಗತ್ಯವಿರುವ ಪೂರ್ವಾನುಮತಿ ಪಡೆಯದೇ ಅಥವಾ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡದೇ, ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಬೃಹತ್ ಯಂತ್ರೋಪಕರಣವನ್ನು ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಟ್ರೇಲರ್ ಚಾಲಕ, EXG Express Global Logistics ಸಾರಿಗೆ ಸಂಸ್ಥೆಯ ಮಾಲೀಕ ಹಾಗೂ ಯಂತ್ರೋಪಕರಣ ಸಾಗಾಟಕ್ಕೆ ಸಂಬಂಧಿಸಿದ ಕಂಪನಿಯ ಅಧಿಕಾರಿಗಳ ವಿರುದ್ಧ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಠಾಣೆ ಅಪರಾಧ ಸಂಖ್ಯೆ 173/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 285 ಹಾಗೂ ಮೋಟಾರು ವಾಹನ ಕಾಯ್ದೆಯ 184 ಮತ್ತು 201ನೇ ಕಲಂಗಳಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬೃಹತ್ ಗಾತ್ರದ ವಾಹನಗಳ ಚಾಲಕರು ಹಾಗೂ ಸಾಗಾಟ ಸಂಸ್ಥೆಗಳು ಸಾರ್ವಜನಿಕರ ಸುರಕ್ಷತೆ ಮತ್ತು ವಾಹನ ಸಂಚಾರದ ಸುಗಮತೆಗೆ ಆದ್ಯತೆ ನೀಡಿ, ನಿಯಮಾನುಸಾರ ಅಗತ್ಯ ಅನುಮತಿ ಪಡೆದು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.


Spread the love
Subscribe
Notify of

0 Comments