ಉಡುಪಿಯಲ್ಲಿ ‘ಮನೆ ಮನೆಗೆ ಕಾಂಗ್ರೆಸ್‌’ ಗೆ ಪ್ರಮೋದ್ ಮಧ್ವರಾಜ್ ಚಾಲನೆ

ಉಡುಪಿಯಲ್ಲಿ ‘ಮನೆ ಮನೆಗೆ ಕಾಂಗ್ರೆಸ್‌’ ಗೆ ಪ್ರಮೋದ್ ಮಧ್ವರಾಜ್ ಚಾಲನೆ

ಉಡುಪಿ: ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಹಮ್ಮಿಕೊಂಡಿರುವ ‘ಮನೆ ಮನೆಗೆ ಕಾಂಗ್ರೆಸ್‌’ಉಡುಪಿ ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮಕ್ಕೆ  ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕನ್ನರ್ ಪಾಡಿಯ ಲೇಬರ್ ಕಾಲನಿಯಲ್ಲಿ ಚಾಲನೆ ನೀಡಿದರು.

ಕಾರ್ಯಕ್ರಮದ ಬಳಿಕ ಸಚಿವ ಪ್ರಮೋದ್ ಮಧ್ವರಾಜ್ ಅವರು ಲೇಬರ್ ಕಾಲನಿಯ ಮನೆಗಳಿಗೆ ತೆರಳಿ ಸರ್ಕಾರದ ಸಾಧನೆಯ ಮಾಹಿತಿಗಳನ್ನು ಒಳಗೊಂಡ ಕಿರುಹೊತ್ತಿಗೆಗಳನ್ನು ಹಸ್ತಾಂತರಿಸಿದರು ಅಲ್ಲದೆ ಮನೆಗಳಿಗೆ ಮನೆ ಮನೆ ಕಾಂಗ್ರೆಸ್ ಸ್ಟೀಕ್ಕರ್ ಅಂಟಿಸಿದರು.

ಸರ್ಕಾರದ ಸಾಧನೆಯ ಮಾಹಿತಿಗಳನ್ನು ಒಳಗೊಂಡ ಕಿರುಹೊತ್ತಿಗೆಗಳನ್ನು ಕಾಂಗ್ರೆಸ್ ನಾಯಕರು ವಿಧಾನ ಸಭಾ ಕ್ಷೇತ್ರದ ಎಲ್ಲಾ 209 ಬೂತ್ ಗಳಲ್ಲಿ ಮನೆ ಮನೆಗೆ ವಿತರಿಸಲಿದ್ದಾರೆ.   ಮತಗಟ್ಟೆ ಸಮಿತಿ ಸದಸ್ಯರು ತಂಡಗಳಾಗಿ ಪ್ರತಿ ದಿನ 10ರಿಂದ 15 ಮನೆಗಳಿಗೆ ತೆರಳಿ ಕರಪತ್ರ ಮತ್ತು ಕಿರುಹೊತ್ತಿಗೆಯನ್ನು ಹಂಚಲಿದ್ದಾರೆ. ವಾರ ಕಾಲ ನಡೆಯಲಿರುವ ಈ ಅಭಿಯಾನದಲ್ಲಿ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿರುವ ಕಾರ್ಯಕರ್ತರನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಂಘಟನೆಗೆ ಬಲ ತುಂಬಲು ಉದ್ದೇಶಿಸಲಾಗಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಮುದ್ರಿಸಿದ ಕರಪತ್ರಗಳನ್ನು ಪ್ರತಿ ಮನೆಗೆ ತಲುಪಿಸಲಾಗುವುದು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶೀಗಳಾದ ಎಸ್ ಸಿ ಬಸವರಾಜು, ವೆರೋನಿಕಾ ಕರ್ನೇಲಿಯೊ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾಂಗ್ರೆಸ್ ನಾಯಕರುಗಳಾದ ಸತೀಶ್ ಅಮೀನ್ ಪಡುಕೆರೆ, ಜನಾರ್ಧನ ಭಂಡಾರ್ ಕರ್, ಭಾಸ್ಕರ್ ರಾವ್ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ನರಸಿಂಹ ಮೂರ್ತಿ, ದಿನೇಶ್ ಪುತ್ರನ್, ನೀರಜ್ ಪಾಟೀಲ್, ನಾರಾಯಣ ಕುಂದರ್, ಅಶೋಕ್ ಕುಮಾರ್ ಕೊಡವೂರು, ದಿವಾಕರ ಕುಂದರ್ ಹಾಗೂ ಇತರರು ಉಪಸ್ಥಿತರಿದ್ದರು.