ಕಡಬ: ಬಿರುಗಾಳಿಗೆ ಮುರಿದು ಬಿದ್ದ ಅಡಿಕೆ ಮರ; ತೋಟದಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು!
ಕಡಬ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಹಾಗೂ ಗಾಳಿಗೆ ಅಡಿಕೆ ಮರವೊಂದು ಮುರಿದು ಬಿದ್ದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಕೇವಳ ಎಂಬಲ್ಲಿ ನಡೆದಿದೆ.
ಕುಂತೂರು ಗ್ರಾಮದ ಕೇವಳ ನಿವಾಸಿ ಯಾದವ ಗೌಡ (66) ಮೃತಪಟ್ಟ ದುರ್ದೈವಿ.
ಶುಕ್ರವಾರ ತಮ್ಮ ಅಡಿಕೆ ತೋಟದಲ್ಲಿ ದೈನಂದಿನ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಭಾರಿ ಗಾಳಿ-ಮಳೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಬಲವಾದ ಗಾಳಿಗೆ ಪಕ್ಕದಲ್ಲಿದ್ದ ಅಡಿಕೆ ಮರವೊಂದು ಯಾದವ ಗೌಡ ಅವರ ಮೇಲೆ ಮುರಿದು ಬಿದ್ದಿದೆ. ತಲೆ ಹಾಗೂ ಮೈಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ದುರಂತದ ವಿಷಯ ತಿಳಿಯುತ್ತಿದ್ದಂತೆಯೇ ಕಡಬ ತಹಶೀಲ್ದಾರ್ ಗಣೇಶ್ ಸವಣೂರ, ಸ್ಥಳೀಯ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













