ಕ್ಯಾಬಿನೆಟ್ ಸಭೆ: ನಿರ್ಣಯಗಳ ಅನುಷ್ಠಾನಕ್ಕೆ ನೋಡಲ್ ಅಧಿಕಾರಿಗಳ ನೇಮಕ :ಸಚಿವ ಯುಟಿ ಖಾದರ್
ಮಂಗಳೂರು: ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ತ್ವರಿತವಾಗಿ ಅನುಷ್ಠಾನಕ್ಕೆ ತರಲು ಸಂಬಂಧಿಸಿದ ಇಲಾಖೆಗಳು ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ಸಚಿವ ಸಂಪುಟ ಸಭೆಯ ನಿರ್ಧಾರಗಳು ಸರಕಾರದ ಆದೇಶವಾಗಿ ಬರಲು ಸಂಬಂಧಿಸಿದ ಇಲಾಖೆಗಳು ಸಚಿವಾಲಯದೊಂದಿಗೆ ನಿರಂತರ ಸಮನ್ವಯದಲ್ಲಿರಬೇಕು. ಈ ಸಂಬಂಧ ತ್ವರಿತವಾಗಿ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿದರು.
ಸರಕಾರ ಆದೇಶ ಹೊರಡಿಸಿದ ಕೂಡಲೇ ಕ್ರಿಯಾಯೋಜನೆ ತಯಾರಿಸಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಬೇಕು. ಅಧಿಕಾರಿಗಳು ಯೋಜನೆಗಳ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರಬೇಕು. ಶೀಘ್ರದಲ್ಲೇ ಮುಖ್ಯಮಂತ್ರಿಗಳು ಇದರ ಪರಿಶೀಲನೆ ನಡೆಸಲು ಆಗಮಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಕುದ್ರು ದ್ವೀಪಗಳ ಅಭಿವೃದ್ಧಿ ಪಿಪಿಪಿ ಮಾಡೆಲ್ನಲ್ಲಿ ನಡೆಯಲಿದ್ದು, ಈ ಬಗ್ಗೆ ಯೋಜನಾ ಅನುಷ್ಠಾನಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಸಿ.ಆರ್.ಜೆಡ್ ಅನುಮೋದನೆ ಪಡೆಯಲು ಕ್ರಮ ಕೈಗೊಂಡು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಚಿವರು ತಿಳಿಸಿದರು.
ಏರ್ಪೋರ್ಟ್ ರಸ್ತೆ ಮರವೂರು ಹೊಸ ಸೇತುವೆ, ಎಕ್ಕೂರಿನಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳ ಯೋಜನೆಗಳ ಡಿಪಿಆರ್ ತಯಾರಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.
ಬಾಳೆಪುಣಿಯಲ್ಲಿ ನಿರ್ಮಾಣವಾಗುತ್ತಿರುವ ಜೈಲಿನ ಕಾಂಪೌಂಡ್ ಕಾಮಗಾರಿಯನ್ನು ತ್ವರಿತವಾಗಿ ನಿರ್ವಹಿಸಬೇಕು. ಮಂಗಳ ಕ್ರೀಡಾಂಗಣದಲ್ಲಿ ಸ್ಟೇಡಿಯಂ ಅನ್ನು ಸಂಪೂರ್ಣವಾಗಿ ಅತ್ಯಾಧುನಿಕವಾಗಿ ಅಭಿವೃದ್ಧಿಗೊಳಿಸಬೇಕು. ಇದಕ್ಕಾಗಿ ಸ್ಟೇಡಿಯಂ ಕಾಮಗಾರಿ ನಿರ್ವಹಿಸಿರುವ ಅನುಭವಿಗಳನ್ನು ಸಂಪರ್ಕಿಸುವಂತೆ ಸಚಿವರು ತಿಳಿಸಿದರು.
ಉಳ್ಳಾಲ ಕೋಟೆಪುರ ಹೊಸ ಸೇತುವೆ ನಿರ್ಮಾಣ ಹಾಗೂ ಹೊಸ ಜೆಟ್ಟಿ ನಿರ್ಮಾಣ ಕಾಮಗಾರಿಯನ್ನು ಸಮನ್ವಯದಿಂದ ನಿರ್ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ ಹೆಚ್.ವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕಾರ್ಬಾರಿ, ಪೆÇಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಮತ್ತಿತ್ತರರು ಇದ್ದರು.













