‘ಟಿಬಿ ಮುಕ್ತ ಭಾರತ’ ನಿರ್ಮಿಸುವ ʼಜೋಶ್‌ʼ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಸಂಸದ ಕ್ಯಾ.ಚೌಟ ಚಾಲನೆ

Spread the love

ದೇಶದೆಲ್ಲೆಡೆ ಕ್ಷಯರೋಗ ಜಾಗೃತಿಗಾಗಿ ಮೋದಿ ಸರ್ಕಾರದಿಂದ ಮಹತ್ವದ ಹೆಜ್ಜೆ

‘ಟಿಬಿ ಮುಕ್ತ ಭಾರತ’ ನಿರ್ಮಿಸುವ ʼಜೋಶ್‌ʼ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಸಂಸದ ಕ್ಯಾ.ಚೌಟ ಚಾಲನೆ

ಮಂಗಳೂರು: ದೇಶದಲ್ಲಿ ಕ್ಷಯರೋಗ(TB) ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವಾಲಯ ಆರಂಭಿಸಿರುವ ಜೋಶ್‌ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

ದೇಶದೆಲ್ಲೆಡೆ ಕ್ಷಯರೋಗವನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡುವ ಮೂಲಕ ಕ್ಷಯ ಮುಕ್ತ ಭಾರತ ನಿರ್ಮಿಸುವ ಪರಿಕಲ್ಪನೆಯ ಈ ಜೋಶ್‌ ಕಾರ್ಯಕ್ರವನ್ನು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಉದ್ಘಾಟಿಸಿದ್ದಾರೆ. ಅದರಂತೆ, ಮಂಗಳೂರಿನಲ್ಲಿರುವ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ನೆರವೇರಿಸಲಾಗಿದೆ. ಸಂಸದ ಕ್ಯಾ. ಚೌಟ ಅವರು ಗಿಡಕ್ಕೆ ನೀರೆಯುವ ಮೂಲಕ ಚಾಲನೆ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕ್ಯಾ. ಚೌಟ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ‘ಟಿಬಿ ಮುಕ್ತ ಭಾರತ’ ಅಭಿಯಾನ ಯಶಸ್ವಿಯಾಗಲು ಜನಸಾಮಾನ್ಯರ ಸಕ್ರಿಯ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಈ ‘ಜೋಶ್’ ಯೋಜನೆಯು ಅತ್ಯುತ್ತಮ ಉಪಕ್ರಮವಾಗಿದ್ದು, ಪಂಚಾಯತ್ ಮಟ್ಟದಿಂದ ಹಿಡಿದು ಪ್ರತಿಯೊಬ್ಬರೂ ಒಂದಾಗಿ ಕೈಜೋಡಿಸುವ ಮೂಲಕ ‘ಟಿಬಿ ಮುಕ್ತ ಪಂಚಾಯತ್‌’ಗಳನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಕ್ಷಯರೋಗದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದ್ದಾರೆ.

ಈ ‘ಜೋಶ್’ (JOSH – Joint Squad for Health) ಯೋಜನೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯಗಳ ಜಂಟಿ ಸಹಯೋಗದೊಂದಿಗೆ ದೇಶದೆಲ್ಲೆಡೆ ಜಾರಿಗೊಳಿಸಲಾಗುತ್ತಿದೆ. ಯುವಜನರಿಗೆ ಕ್ಷಯರೋಗ ನಿರ್ಮೂಲನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ವ್ಯವಸ್ಥಿತ ವೇದಿಕೆ ಕಲ್ಪಿಸುವ ಈ ಯೋಜನೆಯಡಿ, ಪ್ರತಿ ತಂಡದಲ್ಲಿ ಬ್ಲಾಕ್ ಮಟ್ಟದ ಕ್ಲಾಸ್- ಒನ್‌ ಅಧಿಕಾರಿಗಳು, ‘ಮೈ ಭಾರತ್’ (MY Bharat) ಸ್ವಯಂಸೇವಕರು ಮತ್ತು ಎನ್‌ಸಿಸಿ(NCC) ಕೆಡೆಟ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಯುವಜನರ ನೇತೃತ್ವದಲ್ಲಿ ‘ಕ್ಷಯರೋಗ ಮುಕ್ತ ಭಾರತ’ದ ಸಂದೇಶವನ್ನು ತಳಮಟ್ಟದವರೆಗೆ ಕೊಂಡೊಯ್ದು, ಗ್ರಾಮ ಮಟ್ಟದಲ್ಲಿ ವ್ಯಾಪಕವಾದ ಜಾಗೃತಿ ಮೂಡಿಸುವುದು ಈ ತಂಡದ ಪ್ರಮುಖ ಗುರಿಯಾಗಿದೆ.

ಜೋಶ್‌ ಕಾರ್ಯಕ್ರಮದ ಉದ್ಘಾಟನೆ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಜಿಲ್ಲಾ ಟಿಬಿ ನಿರ್ಮೂಲನಾ ಅಧಿಕಾರಿ ಡಾ. ಖತೀಜಾ ಸೇರಿದಂತೆ ಆರೋಗ್ಯ ಇಲಾಖೆಯ ಪ್ರಮುಖ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


Spread the love
Subscribe
Notify of

0 Comments