ಮಹಿಳೆಯರ ಕುತ್ತಿಗೆಯಿಂದ ಸರ ಸುಲಿಗೆ: ಆರೋಪಿ ಬಂಧನ

Spread the love

ಮಹಿಳೆಯರ ಕುತ್ತಿಗೆಯಿಂದ ಸರ ಸುಲಿಗೆ: ಆರೋಪಿ ಬಂಧನ

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿದ್ರೆಯಲ್ಲಿದ್ದ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ ನಡೆಸಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಸುರತ್ಕಲ್ ಪೊಲೀಸರು ಭೇದಿಸಿ, ಆರೋಪಿಯನ್ನು ಬಂಧಿಸಿ ಕಳವಾದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಮೊಹಮ್ಮದ್ ಅಬ್ದುಲ್ ಜಾಫರ್ (28), 2ನೇ ಬ್ಲಾಕ್, ಕಾಟಿಪಳ್ಳ, ಸುರತ್ಕಲ್ ನಿವಾಸಿ ಎಂದು ಗುರುತಿಸಲಾಗಿದೆ.

ಜೂನ್ 26ರಂದು ಮುಂಜಾನೆ ಸುಮಾರು 2 ಗಂಟೆಗೆ ಚೊಕ್ಕಬೆಟ್ಟು ಅಜಾದ್ ನಗರದ 2ನೇ ಬ್ಲಾಕ್‌ನ ನಿವಾಸಿ ಜಾಹೀದ್ ಅವರು ಮನೆಯಲ್ಲಿ ಮಲಗಿದ್ದ ವೇಳೆ, ಕಿಟಕಿಯ ಮೂಲಕ ಕೈ ಹಾಕಿದ ಅಪರಿಚಿತ ವ್ಯಕ್ತಿ ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಎಳೆದಿದ್ದನು. ಈ ವೇಳೆ ಸರ ತುಂಡಾಗಿದ್ದು, ಸುಮಾರು ₹20 ಸಾವಿರ ಮೌಲ್ಯದ ಭಾಗವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ರೀತಿಯಲ್ಲಿ ಜೂನ್ 27ರಂದು ಬೆಳಗ್ಗೆ 5ರಿಂದ 5.15ರ ನಡುವೆ ಚೊಕ್ಕಬೆಟ್ಟು 8ನೇ ಬ್ಲಾಕ್‌ನ ನಿವಾಸಿ ಫಯಾಜ್ ಅವರು ನಮಾಜ್‌ಗೆ ತೆರಳಿದ್ದ ವೇಳೆ, ಮನೆಗೆ ನುಗ್ಗಿದ ಆರೋಪಿ ಬೆಡ್‌ರೂಮ್‌ನಲ್ಲಿ ಮಲಗಿದ್ದ ಅಪ್ರೀನಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡಿದ್ದ. ಸರ ತುಂಡಾಗಿ ಸುಮಾರು ₹1 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು.

ಎರಡೂ ಪ್ರಕರಣಗಳ ತನಿಖೆ ನಡೆಸಿದ ಸುರತ್ಕಲ್ ಪೊಲೀಸರು ಆರೋಪಿಯ ಸುಳಿವು ಪತ್ತೆಹಚ್ಚಿ, ಜೂನ್ 29ರಂದು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಸಮೀಪದಿಂದ ಮೊಹಮ್ಮದ್ ಅಬ್ದುಲ್ ಜಾಫರ್‌ನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಎರಡೂ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲಾ ಕಳವಾದ ಚಿನ್ನಾಭರಣಗಳನ್ನು ಯಥಾಸ್ಥಿತಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಆರೋಪಿಯ ವಿರುದ್ಧ ಈ ಹಿಂದೆಯೂ ಪ್ರಕರಣಗಳು ದಾಖಲಾಗಿವೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2025ರ ಅಪರಾಧ ಪ್ರಕರಣವೊಂದೂ ಹಾಗೂ ಉರ್ವಾ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ದಾಖಲಾಗಿದ್ದ ಮತ್ತೊಂದು ಪ್ರಕರಣವೂ ಆರೋಪಿಯ ವಿರುದ್ಧ ಇರುವುದಾಗಿ ತನಿಖೆಯಿಂದ ತಿಳಿದುಬಂದಿದೆ.


Spread the love
Subscribe
Notify of

0 Comments