ಮಾಧ್ಯಮಗಳ ಸಾಮಾಜಿಕ  ಬದ್ದತೆ ಬದಲಾಗಬಾರದು – ಡಾ.ಪಿ.ಎಲ್.ಧರ್ಮ

ಮಾಧ್ಯಮಗಳ ಸಾಮಾಜಿಕ  ಬದ್ದತೆ ಬದಲಾಗಬಾರದು – ಡಾ.ಪಿ.ಎಲ್.ಧರ್ಮ

ಉಡುಪಿ:  ಮಾಧ್ಯಮ ಬದಲಾಗುತ್ತಿದೆ, ಮಾಧ್ಯಮದಲ್ಲಿರುವ ಆಲೋಚನೆಗಳು ಕೂಡ ಬದಲಾಗುತ್ತಿದೆ, ಆದರೇ ಮಾಧ್ಯಮಕ್ಕಿರುವ ಸಾಮಾಜಿಕ ಬದ್ಧತೆ ಬದಲಾಗಬಾರದು ಎಂದು ಮಂಗಳೂರು ವಿ.ವಿ.ಯ ರಾಜಕೀಯ ಶಾಸ್ತ್ರ ಉಪನ್ಯಾಸಕ ಡಾ. ಪಿ.ಎಸ್.ಧರ್ಮ ಹೇಳಿದ್ದಾರೆ.

 ಅವರು ಸೋಮವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ ಕ್ಲಬ್ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

  ಬಡತನದಲ್ಲಿರುವ, ಶೋಷಿತರ, ಉದ್ಯೋಗಾವಕಾಶ ವಂಚಿತರ ಬಗ್ಗೆ ಮಠಾಧಿಪತಿಗಳಾಗಲಿ, ಶ್ರೀಮಂತರಾಗಲಿ, ರಾಜಕಾರಣಿಗಳಾಗಲಿ ಪ್ರಶ್ನೆ ಎತ್ತುವುದಿಲ್ಲ, ಆದರೇ ಈ ಬಗ್ಗೆ ಮಾಧ್ಯಮಗಳು ಸತತವಾಗಿ ಪ್ರಶ್ನೆ ಎತ್ತುತ್ತಿವೆ ಎಂದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಕೂಡ ಗುರುತಿಸಿ, ಅವರನ್ನೂ ಕೂಡ ತಮ್ಮ ವಸ್ತು ವಿಷಯವನ್ನಾಗಿಸುವ ಮಾಧ್ಯಮಗಳ ಸಾಮಾಜಿಕ ಬದ್ಧತೆ ಬಹಳ ದೊಡ್ಡದು ಎಂದವರು ಶ್ಲಾಘಿಸಿದರು.

  ಪತ್ರಕರ್ತರು ಕೆಲವೇ ಆಯ್ದ ವಿಷಯಗಳಿಗಷ್ಟೇ ಸೀಮಿತರಾಗಬಾರದು, ಪತ್ರಕರ್ತರು ಸದಾ ಕಣ್ಣುಗಳನ್ನು ತೆರೆದಿಟ್ಟುಕೊಳ್ಳಬೇಕು, ಸಂಗೀತದ ಜೊತೆಗೆ ರೋದನೆಯನ್ನು, ಸಾಧನೆಯ ಜೊತೆಗೆ ಪ್ರತಿಭಟನೆಯನ್ನೂ ವರದಿಯ ವಿಷಯವನ್ನಾಗಿಸಿಕೊಳ್ಳಬೇಕು,  ಸಮುದಾಯ, ಶಿಕ್ಷಣ, ಬಡತನ ಇವು ಪತ್ರಿಕೋದ್ಯಮದ ಆದ್ಯತೆಯ ವಿಷಯಗಳಾಬೇಕು ಎಂದವರು ಸಲಹೆ ಮಾಡಿದರು.

ಮೈಸೂರು ಸಿಟಿ ಟುಡೇ ಸಂಜೆ ದೈನಿಕದ  ಹಿರಿಯ ಛಾಯಾಗ್ರಾಹಕ ಜಿ.ಕೆ.ಹೆಗಡೆ ಮಾತನಾಡಿ ಪತ್ರಿಕೆಯಲ್ಲಿ ಬರುವ ಬರಹಗಳಷ್ಟೇ ಛಾಯಾಚಿತ್ರವೂ ಪ್ರಮುಖಪಾತ್ರವಹಿಸಲಿದೆ. ಅಷ್ಟೇ ಅಲ್ಲದೆ ಛಾಯಾಚಿತ್ರವೊಂದೇ ಓದುಗನಿಗೆ ಸಂಪೂರ್ಣ ವಿಷಯದ ಅರಿವು ಮೂಡಿಸಲಿದೆ ಎಂದರು.

  ಇದೇ ಸಂದರ್ಭದಲ್ಲಿ ಜಿ.ಕೆ.ಹೆಗಡೆ ಅವರಿಂದ ತಮ್ಮ ಛಾಯಾಚಿತ್ರಗಳ ಪ್ರದರ್ಶನ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.

  ನಂತರ 2018ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಕುಲದಾಸ ಪೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ, ಕಾರ್ಕಳದ ಹಿರಿಯ ಪತ್ರಿಕಾ ವಿತರಕ ಮೊಹಮ್ಮದ್ ಇಸ್ಮಾಯಿಲ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯ ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸಲಾಯಿತು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.

ಕನ್ನಡಪ್ರಭ ಪತ್ರಿಕೆಯ ಸುಭಾಶ್ಚಂದ್ರ ವಾಗ್ಳೆ, ಹೊಸದಿಗಂತ ಪತ್ರಿಕೆಯ ಪುಂಡಲೀಕ ಮರಾಠೆ, ದಿಗ್ವೀಜಯ ವಾಹಿನಿ ಅಶೋಕ್, ವಿ4 ವಾಹಿನಿಯ ಶ್ರೀಕಾಂತ್ ಹೆಮ್ಮಾಡಿ, ಖಲೀಲ್ ಅಹ್ಮದ್, ವಿಜಯ ಕರ್ನಾಟಕ ಪತ್ರಿಕೆ ಅಜಿತ್ ಆರಾಡಿ ಸನ್ಮಾನಿತರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪರಿಚಯ ಮಾಡಿದರು

  ಮುಖ್ಯ ಅತಿಥಿಯಾಗಿ ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಶುಭ ಹಾರೈಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಅಧ್ಯಕ್ಷತೆ ವಹಿಸಿದ್ದರು.  ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್  ವೇದಿಕೆಯಲ್ಲಿದ್ದರು. ಜೊತೆ ಕಾರ್ಯದರ್ಶಿ ಮೈಕಲ್ ರಾಡ್ರಿಗಸ್ ಸ್ವಾಗತಿಸಿ, ಪತ್ರಕರ್ತ ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.