ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹6.23 ಲಕ್ಷ ವಂಚನೆ; ಪ್ರಕರಣ ದಾಖಲು

Spread the love

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹6.23 ಲಕ್ಷ ವಂಚನೆ; ಪ್ರಕರಣ ದಾಖಲು

ಉಡುಪಿ: ಯುನೈಟೆಡ್ ಕಿಂಗ್ಡಮ್ (ಯುಕೆ)ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹6.23 ಲಕ್ಷ ಹಣ ಹಾಗೂ ಪಾಸ್ಪೋರ್ಟ್ ಪಡೆದು ವಂಚನೆ ಎಸಗಿರುವ ಆರೋಪದಡಿ ನಾಲ್ವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಟ್ಟೂರು ನಿವಾಸಿ ಎನ್.ಆರ್. ಪದ್ಮನಾಭ ಉಪಾಧ್ಯ ನೀಡಿದ ದೂರಿನಂತೆ, ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಆಶ್ಲೆ ಕರ್ನೇಲಿಯೋ ಎಂಬಾತ 2025ರ ಫೆಬ್ರವರಿ 12ರಂದು ಸಂಪರ್ಕಿಸಿ, ಯುಕೆ ದೇಶದಲ್ಲಿ ಹೌಸ್ ಕೀಪಿಂಗ್ ಸೂಪರ್ವೈಸರ್ ಉದ್ಯೋಗ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾನೆ ಎಂದು ತಿಳಿಸಲಾಗಿದೆ.

ಬಳಿಕ ತನ್ನ ಸಹಾಯಕಿ ಎಂದು ಹೇಳಲಾದ ಸವಿತಾ ಅವರ ಮೊಬೈಲ್ ಸಂಖ್ಯೆಯನ್ನು ನೀಡಿದ್ದು, ಸಂಪರ್ಕಿಸಿದ ವೇಳೆ ವೀಸಾ ಪ್ರಕ್ರಿಯೆಗಾಗಿ ₹2 ಲಕ್ಷ ಪ್ರೊಸೆಸಿಂಗ್ ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಅದರಂತೆ ಎನ್.ಆರ್. ಪದ್ಮನಾಭ ಉಪಾಧ್ಯ 19-03-2025ರಂದು ಬ್ಯಾಂಕ್ ಆಫ್ ಬರೋಡ ಖಾತೆಗೆ ₹2 ಲಕ್ಷ ಜಮಾ ಮಾಡಿದ್ದಾರೆ.

ನಂತರ ಪ್ರಕೃತಿ ಮತ್ತು ಪ್ರಶಾಂತ್ ಎಂಬ ಇನ್ನಿಬ್ಬರು ಆರೋಪಿಗಳು ಕೂಡ ಸೇರಿಕೊಂಡು ಮೆಡಿಕಲ್ ಪರೀಕ್ಷೆ, ವೀಸಾ ಸ್ಟಾಂಪಿಂಗ್ ಹಾಗೂ ಎಂಬಸಿ ಪ್ರಕ್ರಿಯೆ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಒಟ್ಟು ₹6,23,000 ಹಣ ಹಾಗೂ ಪಾಸ್ಪೋರ್ಟ್ ಪಡೆದ ಬಳಿಕ, ಆರೋಪಿತರು ವೀಸಾ ತಿರಸ್ಕೃತವಾಗಿದೆ ಎಂದು ಹೇಳಿ ಹಣ ಮತ್ತು ಪಾಸ್ಪೋರ್ಟ್ ಹಿಂತಿರುಗಿಸುವುದಾಗಿ ತಿಳಿಸಿದ್ದರು. ಆದರೆ ನಂತರ ಫೋನ್ ಸಂಪರ್ಕ ಕಡಿತಗೊಳಿಸಿ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ವಂಚನೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಲಾದ ಖಾಸಗಿ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments