ಮಂಗಳೂರು ಕಾರಾಗೃಹದಲ್ಲಿ ಮಾಡೂರು ಯೂಸೂಫ್ ಹತ್ಯೆ ಪ್ರಕರಣ: ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Spread the love

ಮಂಗಳೂರು ಕಾರಾಗೃಹದಲ್ಲಿ ಮಾಡೂರು ಯೂಸೂಫ್ ಹತ್ಯೆ ಪ್ರಕರಣ: ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಮಂಗಳೂರು ಕಾರಾಗೃಹದಲ್ಲಿ 2015ರಲ್ಲಿ ನಡೆದ ಮಾಡೂರು ಯೂಸೂಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ಒಟ್ಟು 76 ಸಾವಿರ ರೂ. ದಂಡ ವಿಧಿಸಿ ಅ.1ರಂದು ತೀರ್ಪು ಪ್ರಕಟಿಸಿದೆ.

2015ರ ನವೆಂಬರ್ 2ರಂದು ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಕಾರಾಗೃಹದಲ್ಲಿ ಮಾಡೂರು ಯೂಸೂಫ್ ಹತ್ಯೆ ನಡೆದಿತ್ತು. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಆರೋಪಿಗಳಾದ ಲಿತೇಶ್ ಪೂಜಾರಿ ಅಲಿಯಾಸ್ ಲಿತ್ತು, ಶೋಭರಾಜ್ ಅಲಿಯಾಸ್ ಶೋಭಿ, ಯುವರಾಜ್, ಪ್ರದೀಪ್ ಹಾಗೂ ಉಮೇಶ್ ಕೊಂಬಾರ್ ಅಲಿಯಾಸ್ ಉಮೇಶ್ ಕುಂಬಾರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಬಿ. ಮೋಹನ್ ಕುಮಾರ್ ವಾದ ಮಂಡಿಸಿದ್ದರು. ಅಂದಿನ ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ತಿಲಕ್ ಚಂದ್ರ ಅವರು ಪ್ರಕರಣದ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಸುಮಾರು 11 ವರ್ಷಗಳ ಹಿಂದೆ ನಡೆದಿದ್ದ ಈ ಹತ್ಯೆ ಪ್ರಕರಣದಲ್ಲಿ ಇದೀಗ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.


Spread the love
Subscribe
Notify of

0 Comments