ಮಂಗಳೂರು | ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡಿದ ವ್ಯಕ್ತಿಗೆ ಜೈಲು ಶಿಕ್ಷೆ, ದಂಡ
ಮಂಗಳೂರು: ಯಾವ ಪ್ರಕರಣದಲ್ಲೂ ಯಾವ ಆರೋಪಿಗೆ ತಾನು ಜಾಮೀನು ನೀಡಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ ಆರೋಪಿ ಮುಹಮ್ಮದ್ ಇಸ್ಮಾಯೀಲ್ ಎಂಬಾತನಿಗೆ 2ನೇ ಜೆಎಂಎಫ್‌ಸಿ ನ್ಯಾಯಾಲಯ 3 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2017ರ ಸೆ.8ರಂದು ಆರೋಪಿ ಇಸ್ಮಾಯಿಲ್ ಮಂಗಳೂರಿನ ಮಾನ್ಯ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶಪಥ ಪತ್ರದ ಜತೆಗೆ ಘೋಷಣಾ ಪತ್ರವನ್ನು ಸಲ್ಲಿಸಿದ್ದ. ಅದರಲ್ಲಿ ತಾನು ಈವರೆಗೆ ನ್ಯಾಯಾಲಯದ ಯಾವುದೇ ಪ್ರಕರಣ ದಲ್ಲಿ ಯಾವುದೇ ಆರೋಪಿಗೆ ಜಾಮೀನು ನೀಡಿರುವುದಿಲ್ಲ ಎಂದು ಘೋಷಿಸಿದ್ದ. ಆದರೆ ಆರೋಪಿಯು ಈ ಹಿಂದೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ಆರೋಪಿಗೆ ಜಾಮೀನು ನೀಡಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ.
ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ:199ರಡಿ ದಂಡಿಸಲ್ಪಡುವ ಅಪರಾಧಕ್ಕೆ ದೂರನ್ನು ದಾಖಲು ಮಾಡಬೇಕೆಂದು ನಿರ್ದೇಶನವಿದೆ. ಅದರಂತೆ ನ್ಯಾಯಾಲಯದ ಮುಖ್ಯ ಲಿಪಿಕ ಅಧಿಕಾರಿ ಆರೋಪಿ ವಿರುದ್ಧ ದೂರು ನೀಡಿದ್ದಾರೆ.
ವಿಚಾರಣೆಯನ್ನು ಕೈಗೆತ್ತಿಕೊಂಡ 2ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಶಶಿಕಲಾ ಜಿ. ವಾದ-ಪ್ರತಿವಾದಗಳನ್ನು ಆಲಿಸಿ ಆರೋಪಿಗೆ 3 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು 5ಸಾವಿರ ರೂ. ದಂಡ ವಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಆರೋಪಿ 1ತಿಂಗಳು ಸಾದಾ ಕಾರಾಗೃಹದ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಅಭಿಯೋಜಕಿ ಸುಮಂಗಲಾ ಚಂದ್ರಶೇಖರ ನಾಯ್ಕ ವಾದ ಮಂಡಿಸಿದ್ದರು.













