ಜೈಲಿನಲ್ಲೇ ವಾರ್ಡನ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 5 ವರ್ಷ ಜೈಲು, 40,000 ರೂ. ದಂಡ

Spread the love

ಜೈಲಿನಲ್ಲೇ ವಾರ್ಡನ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 5 ವರ್ಷ ಜೈಲು, 40,000 ರೂ. ದಂಡ

ಉಡುಪಿ: ಜಿಲ್ಲಾ ಕಾರಾಗೃಹದ ಜೈಲ್ ವಾರ್ಡನ್ಗೆ ಕೊಲೆ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 40 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

2011ರ ಡಿಸೆಂಬರ್ 3ರಂದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜಾರು ಗ್ರಾಮದ ಉಡುಪಿ ಜಿಲ್ಲಾ ಕಾರಾಗೃಹದ ಮೊದಲ ಬ್ಯಾರಕ್ ಎದುರಿನ ವರಾಂಡದಲ್ಲಿ ಘಟನೆ ನಡೆದಿತ್ತು. ಜೈಲ್ ವಾರ್ಡನ್ ಅವರು ಪ್ರಭಾರ ವಹಿಸಿಕೊಳ್ಳುವ ಸಲುವಾಗಿ ಬಂಧಿಗಳ ಲೆಕ್ಕ ತೆಗೆದುಕೊಳ್ಳಲು ತಮ್ಮ ತಮ್ಮ ಬ್ಯಾರಕ್ಗಳಿಗೆ ತೆರಳುವಂತೆ ಸೂಚಿಸಿದ್ದರು. ಈ ವೇಳೆ ಅಡುಗೆ ಕೋಣೆಯ ಎದುರುಗಡೆ ಇದ್ದ ವಿಚಾರಣಾ ಬಂಧಿ ಸಫಾನ್ ಹುಸೈನ್ ಅಲಿಯಾಸ್ ರಜಾಕ್ ಎಂಬಾತ ಜೈಲ್ ವಾರ್ಡನ್ ಅವರನ್ನು ಉದ್ದೇಶಿಸಿ ಅವಾಚ್ಯವಾಗಿ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದ. ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು 2012ರ ಜನವರಿ 10ರಂದು ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ನ್ಯಾಯಾಲಯ ಆರೋಪಿಗೆ 2013ರ ಮೇ 29ರಂದು ಜಾಮೀನು ಮಂಜೂರು ಮಾಡಿತ್ತು. ಆದರೆ ವಿಚಾರಣೆಗೆ ಹಾಜರಾಗದೆ ಆರೋಪಿ ತಲೆಮರೆಸಿಕೊಂಡಿದ್ದರಿಂದ ಪ್ರಕರಣವು 2022ರ ಜೂನ್ 24ರಂದು ಎಲ್ಪಿಸಿ ನಂ.02/2022ರಂತೆ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಸಫಾನ್ ಹುಸೈನ್ನನ್ನು 2026ರ ಏಪ್ರಿಲ್ 23ರಂದು ಬಾಡಿ ವಾರಂಟ್ ಮೂಲಕ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗೆ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 40,000 ದಂಡ ವಿಧಿಸಿ ತೀರ್ಪು ನೀಡಿದೆ


Spread the love
Subscribe
Notify of

0 Comments