ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಧರಣಿ: ಪ್ರಮೋದ್ ಮುತಾಲಿಕ್ ಎಚ್ಚರಿಕೆ

Spread the love

ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಧರಣಿ: ಪ್ರಮೋದ್ ಮುತಾಲಿಕ್ ಎಚ್ಚರಿಕೆ

ಮಂಗಳೂರು: ಕರ್ನಾಟಕ ಸರ್ಕಾರ ಅಧಿಕೃತವಾಗಿ ಘೋಷಿಸಿರುವ ದಸರಾ ರಜೆಯ ಅವಧಿಯಲ್ಲಿ ತರಗತಿಗಳು ಹಾಗೂ ಪರೀಕ್ಷೆಗಳನ್ನು ನಡೆಸುವ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ರಜೆಯ ಅವಧಿಯಲ್ಲಿ ಶಾಲೆಗಳನ್ನು ನಡೆಸುವ ಮೂಲಕ ಹಿಂದೂ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಹಬ್ಬದ ಆಚರಣೆಯಿಂದ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕ ಸರ್ಕಾರವು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 3ರಿಂದ 21ರವರೆಗೆ ದಸರಾ ರಜೆ ಘೋಷಿಸಿದೆ. ಆದರೆ, ಕೆಲವು ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳು ಇದೇ ಅವಧಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು, ತರಗತಿಗಳನ್ನು ಮುಂದುವರಿಸುವುದು ಹಾಗೂ ಪಠ್ಯ ಬೋಧನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಮುತಾಲಿಕ್ ಹೇಳಿದರು.

ದಸರಾ ರಜೆಯನ್ನು ಕಡಿತಗೊಳಿಸಿ ಕ್ರಿಸ್ಮಸ್ ಸಂದರ್ಭದಲ್ಲಿ ಹೆಚ್ಚುವರಿ ರಜೆ ನೀಡುವುದು ಅನ್ಯಾಯ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ದಸರಾ ಪ್ರಮುಖ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಹಬ್ಬವಾಗಿದ್ದು, ಹಬ್ಬದ ದಿನಗಳಲ್ಲಿ ಪರೀಕ್ಷೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳು ಹಾಗೂ ಕುಟುಂಬಗಳು ಹಬ್ಬವನ್ನು ಪೂರ್ಣವಾಗಿ ಆಚರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಕಾನ್ವೆಂಟ್ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇರುವುದರಿಂದ ದಸರಾ ಹಬ್ಬದ ಸಂದರ್ಭದಲ್ಲಿ ರಜೆ ನೀಡಬೇಕು ಎಂದು ಅವರು ಆಗ್ರಹಿಸಿದರು. ದಸರಾ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಆರೋಪಿಸಿದ ಅವರು, ಇದನ್ನು ಸಾಂಸ್ಕೃತಿಕ ವಿಚಾರವಾಗಿಯೂ ಪರಿಗಣಿಸಬೇಕಿದೆ ಎಂದು ಹೇಳಿದರು.

ಕಳೆದ ವರ್ಷ ಈ ಕುರಿತು ಶಿಕ್ಷಣ ಸಚಿವರು, ಡಿಡಿಪಿಐ, ಬಿಇಒ ಹಾಗೂ ಕಾನ್ವೆಂಟ್ ಶಾಲೆಗಳ ಆಡಳಿತ ಮಂಡಳಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಕೆಲವು ಕಡೆ ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಪ್ರಕರಣಗಳನ್ನೂ ದಾಖಲಿಸಲಾಗಿತ್ತು ಎಂದು ಮುತಾಲಿಕ್ ತಿಳಿಸಿದರು.

ಈ ಬಾರಿಯೂ ದಸರಾ ರಜೆ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಶಾಲೆಗಳನ್ನು ನಡೆಸಿದರೆ, ರಾಜ್ಯಾದ್ಯಂತ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕ್ರಿಸ್ಮಸ್ ಸಂದರ್ಭದಲ್ಲಿ 10 ದಿನಗಳ ರಜೆ ನೀಡುವ ಬದಲು ಡಿಸೆಂಬರ್ 25ರಂದು ಒಂದು ದಿನದ ರಜೆ ನೀಡಿದರೆ ಸಾಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ಈ ಕುರಿತು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಸರಾ ರಜೆ ವಿಚಾರದೊಂದಿಗೆ ರಾಮ ಸೇನೆ ಹಾಗೂ ಶ್ರೀರಾಮ ಸೇನೆ ಸಂಘಟನೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಕುರಿತೂ ಕೆಲವು ನಿರ್ಧಾರಗಳನ್ನು ಪ್ರಕಟಿಸಲಾಯಿತು.

ತುಳು ಭಾಷೆಗೆ 2ನೇ ಅಧಿಕೃತ ಭಾಷೆ ಮಾನ್ಯತೆ ಹಾಗೂ 8ನೇ ಪರಿಚ್ಛೇದಕ್ಕೆ ಆಗ್ರಹ,
ಮಂಗಳೂರಿಗೆ ಆಗಮಿಸಿದ್ದ ವೇಳೆ ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ ಮುತಾಲಿಕ್, ಇದು ತುಳುನಾಡಿನ ಜನರ ದೀರ್ಘಕಾಲದ ಬೇಡಿಕೆಯಾಗಿತ್ತು ಎಂದರು. ಮುಂದುವರಿದು, ಕರ್ನಾಟಕದ ಎಲ್ಲಾ ಸಂಸದರು (MP) ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮುಂದಿನ ಪ್ರಕ್ರಿಯೆಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅನಾರೋಗ್ಯದಿಂದ ಬಳಲುತ್ತಿರುವ ರಾಮ ಸೇನೆಯ ನಾಯಕ ಪ್ರಸಾದ್ ಅತ್ತಾವರ ಅವರನ್ನು ಭೇಟಿಯಾಗಿ ಕ್ಷೇಮ ವಿಚಾರಿಸಿದ್ದು, ಈ ವೇಳೆ ಸಂಘಟನಾತ್ಮಕ ವಿಷಯಗಳ ಕುರಿತು ದೀರ್ಘ ಚರ್ಚೆ ನಡೆಸಲಾಗಿದೆ. ಇನ್ಮುಂದೆ ರಾಮ ಸೇನೆ ಮತ್ತು ಶ್ರೀರಾಮ ಸೇನೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಲಾಗಿದೆ. ಇಡೀ ರಾಜ್ಯಾದ್ಯಂತ ‘ಶ್ರೀರಾಮ ಸೇನೆ’ ಎಂಬ ಒಂದೇ ಸಂಘಟನೆಯ ಹೆಸರಿನಲ್ಲಿ ಕಾರ್ಯಕರ್ತರು ಒಗ್ಗೂಡಿ ಸಂಘಟನೆಯನ್ನು ಬಲಪಡಿಸಲಿದ್ದಾರೆ ಎಂದು ಮುತಾಲಿಕ್ ಪ್ರಕಟಿಸಿದರು.

ಪ್ರಸಾದ್ ಅತ್ತಾವರ ಅವರ ಆರೋಗ್ಯ ಚೇತರಿಸಿಕೊಂಡ ನಂತರ ಇಬ್ಬರೂ ಸೇರಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಂಘಟನೆಯನ್ನು ಮತ್ತಷ್ಟು ಸಕ್ರಿಯಗೊಳಿಸಲಿದ್ದೇವೆ. ರಾಮ ಸೇನೆಯ ರಾಜ್ಯ ಪದಾಧಿಕಾರಿಗಳೂ ಸಹ ಈ ನಿರ್ಧಾರಕ್ಕೆ ಸಮ್ಮತಿಸಿದ್ದಾರೆ. ಪ್ರಸ್ತುತ ದೇಶ ಹಾಗೂ ರಾಜ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಿಂದುತ್ವ ಸಂಘಟಕರು ಹಾಗೂ ಕಾರ್ಯಕರ್ತರು ಒಗ್ಗೂಡಬೇಕಾದ ಅಗತ್ಯವಿದೆ. ಇದು ಯಾವುದೇ ಸ್ಪರ್ಧಾತ್ಮಕ ನಿರ್ಧಾರವಲ್ಲ, ಬದಲಾಗಿ ಸಮಾನ ಮನಸ್ಕರು ಒಂದಾಗಿ ಕೆಲಸ ಮಾಡುವ ನಿರ್ಧಾರವಾಗಿದೆ ಎಂದರು.


Spread the love
Subscribe
Notify of

0 Comments