ಅಕ್ಟೋಬರ್ 2ರಂದು ಅಶೋಕ್ ಸಿಂಘಾಲ್ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಚಾಲನೆ
ಮಂಗಳೂರು: ರಾಮಜನ್ಮಭೂಮಿ ಹೋರಾಟದ ರೂವಾರಿ ಹಾಗೂ ವಿಶ್ವ ಹಿಂದೂ ಪರಿಷತ್ನ ಹಿರಿಯ ನಾಯಕ ಪೂಜನೀಯ ಅಶೋಕ್ ಸಿಂಘಾಲ್ ಜೀ ಅವರ ಶತಮಾನೋತ್ಸವದ ಅಂಗವಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದರ ಭಾಗವಾಗಿ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ವತಿಯಿಂದ ಅಕ್ಟೋಬರ್ 2ರಂದು ಮಂಗಳೂರಿನಲ್ಲಿ ಶತಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.
ಅಕ್ಟೋಬರ್ 2, ಶುಕ್ರವಾರ ಮಧ್ಯಾಹ್ನ 3.30ಕ್ಕೆ ಕೊಡಿಯಾಲ್ಬೈಲ್ನ ಶಾರದಾ ವಿದ್ಯಾಲಯದ ಭೂವರಾಹ ಆಡಿಟೋರಿಯಂನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರು, ಶ್ರೀ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಶ್ರೀ ಗುರುದೇವದತ್ತ ಸಂಸ್ಥಾನಂ ಒಡಿಯೂರಿನ ಸಾಧ್ವಿ ಮಾತಾನಂದಮಯೀ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಅಧ್ಯಕ್ಷ ಹಾಗೂ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸಾಮಾಜಿಕ ಮುಖಂಡ ಶ್ರೀ ವೆಂಕಣ್ಣ ಕೊಯ್ಯೂರು ಉದ್ಘಾಟಿಸಲಿದ್ದಾರೆ.
ಅಭ್ಯಾಗತರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘ ಚಾಲಕ ಡಾ. ವಾಮನ ಶೆಣೈ ಹಾಗೂ ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದ ಕಾರ್ಯಕಾರಿಣಿ ಸದಸ್ಯ ಮತ್ತು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಭಾಗವಹಿಸಲಿದ್ದಾರೆ. ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷ ಶ್ರೀ ಟಿ.ಎ.ಪಿ. ಶೆಣೈ ವಕ್ತಾರರಾಗಿ ಭಾಗವಹಿಸಲಿದ್ದಾರೆ.
ಅಶೋಕ್ ಸಿಂಘಾಲ್ ಅವರ ಸಂಘಟನಾ ಸೇವೆ
ಉನ್ನತ ಅಧಿಕಾರಿಗಳ ಕುಟುಂಬದಲ್ಲಿ ಜನಿಸಿದ ಅಶೋಕ್ ಸಿಂಘಾಲ್ ಅವರು ಬಿ.ಟೆಕ್ ಪದವಿ ಪಡೆದ ಬಳಿಕ ಆರ್ಎಸ್ಎಸ್ನೊಂದಿಗೆ ಸಂಪರ್ಕ ಹೊಂದಿ, ಪೂರ್ಣಕಾಲಿಕ ಪ್ರಚಾರಕರಾಗಿ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪೂಜನೀಯ ಗುರೂಜಿ, ಶ್ರೀ ಬಾಳಾಸಾಹೇಬ್ ದೇವರಸ್ ಹಾಗೂ ಪ್ರೊ. ರಾಜೇಂದ್ರ ಸಿಂಗ್ (ರಜ್ಜು ಭಯ್ಯಾ) ಅವರ ಮಾರ್ಗದರ್ಶನದಲ್ಲಿ ಅವರು ಸಂಘಟನಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
1980ರಲ್ಲಿ ವಿಶ್ವ ಹಿಂದೂ ಪರಿಷತ್ಗೆ ನಿಯೋಜಿತರಾದ ಅವರು ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ, 1984ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ನಂತರ ದೀರ್ಘಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ವೇದಗಳ ಪ್ರಚಾರ, ಗೋ ಸಂರಕ್ಷಣೆ, ಮತಾಂತರ ತಡೆ ಹಾಗೂ ವಿವಿಧ ಸೇವಾ ಕಾರ್ಯಗಳಲ್ಲಿ ಹಿಂದೂ ಸಮಾಜದ ಪಾಲ್ಗೊಳ್ಳುವಿಕೆಗೆ ಅವರು ಒತ್ತು ನೀಡಿದ್ದರು.
1984ರಲ್ಲಿ ದೆಹಲಿಯಲ್ಲಿ ನಡೆದ ಮೊದಲ ಧರ್ಮ ಸಂಸತ್ನ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಶೋಕ್ ಸಿಂಘಾಲ್ ಅವರು ರಾಮಜನ್ಮಭೂಮಿ ವಿಚಾರವನ್ನು ಮುಂಚೂಣಿಗೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 1989ರ ನಂತರ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಶಂಕುಸ್ಥಾಪನೆ, ಶಿಲಾನ್ಯಾಸ ಹಾಗೂ ಕರಸೇವಾ ಚಳವಳಿಗಳ ಸಂಘಟನೆಯಲ್ಲಿಯೂ ಅವರು ಪ್ರಮುಖ ಜವಾಬ್ದಾರಿ ವಹಿಸಿದ್ದರು.
ಅಶೋಕ್ ಸಿಂಘಾಲ್ ಅವರ ಶತಮಾನೋತ್ಸವದ ಅಂಗವಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಮನವಿ ಮಾಡಿದೆ.













