ಅಕ್ರಮ ಜಾನುವಾರು ಸಾಗಾಟ: ಇಬ್ಬರ ವಿರುದ್ಧ ಪ್ರಕರಣ ದಾಖಲು
ಸುಬ್ರಹ್ಮಣ್ಯ: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಅಪಘಾತಕ್ಕೀಡಾದ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ-ಬಿಸ್ಲೆ ರಸ್ತೆಯ ಡಿಪ್ಪೋ ಸಮೀಪ ಜೂನ್ 13ರಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಇಬ್ಬರ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
KA-13 D 1923 ನೋಂದಣಿ ಸಂಖ್ಯೆಯ ಪಿಕಪ್ ವಾಹನ ಆಯತಪ್ಪಿ ರಸ್ತೆ ಬದಿಗೆ ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಾಹನವನ್ನು ವಶಕ್ಕೆ ಪಡೆದು, ಚಾಲಕ ಚಂದ್ರು @ ಚಂದ್ರಶೇಖರ ಹಾಗೂ ಕ್ಲೀನರ್ ಮೋಹನ ಎಂಬವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಇಬ್ಬರೂ ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿಗಳೆಂದು ತಿಳಿದುಬಂದಿದೆ.
ಈ ವೇಳೆ ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದಾಗ, ಯಾವುದೇ ಪರವಾನಗಿ ಇಲ್ಲದೆ ಎರಡು ಜಾನುವಾರುಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.
ವಾಹನ ಅಪಘಾತಕ್ಕೀಡಾದ ಬಳಿಕ ಜಾನುವಾರುಗಳನ್ನು ವಾಹನದಿಂದ ಇಳಿಸಿ ಓಡಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ಘಟನಾ ಸ್ಥಳದ ಸಮೀಪದಲ್ಲೇ ಎರಡು ಜಾನುವಾರುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಕಪ್ ವಾಹನ ಹಾಗೂ ಎರಡು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 21/2025ರಡಿ ಕರ್ನಾಟಕ ಗೋವುಗಳ ಸಂರಕ್ಷಣಾ ಮತ್ತು ಜಾನುವಾರು ಪ್ರತಿಬಂಧಕ ಕಾಯ್ದೆ-2020ರ ಕಲಂ 4, 5, 7, 12, ಪ್ರಾಣಿ ಸಂರಕ್ಷಣಾ ಕಾಯ್ದೆ-1960ರ ಕಲಂ 11(1)(D) ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆ-1988ರ ಕಲಂ 66, 192(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.













