ತುಂಬೆ ನೀರಿನ ಮಟ್ಟ ಭಾರೀ ಇಳಿಕೆ, ಕಳೆದ ಏಳು ವರ್ಷದಲ್ಲೇ ಕನಿಷ್ಠ

Spread the love

ತುಂಬೆ ನೀರಿನ ಮಟ್ಟ ಭಾರೀ ಇಳಿಕೆ, ಕಳೆದ ಏಳು ವರ್ಷದಲ್ಲೇ ಕನಿಷ್ಠ

ಮಂಗಳೂರು: ಕಳೆದ ಕೆಲ ವಾರದಿಂದ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಗಣನೀಯ ಕುಸಿತ ಕಾಣುತ್ತಿದೆ. ಕಳೆದ 7 ವರ್ಷಗಳ ಕನಿಷ್ಠ ಮಟ್ಟವಾದ 4.47 ಮೀ.ಗೆ ಇಳಿಕೆಯಾಗಿದೆ. ಈ ನಡುವೆ ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ ಮಾಡಿದ್ದು, ದಿನ ಬಿಟ್ಟು ದಿನ ನೀರು ಪೂರೈಕೆಯಾಗಲಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ. 2025ರಲ್ಲಿ ಎ.25ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 60.2ಮಿ.ಮೀ. ವಾಡಿಕೆ ಮಳೆಯಲ್ಲಿ 119.7 ಮಿ.ಮೀ. ಮಳೆ ಸುರಿದಿತ್ತು. ಇದೇ ಕಾರಣಕ್ಕೆ ತುಂಬೆಯಲ್ಲಿ ನೀರಿನ ಮಟ್ಟ 5.35ಮೀ. ಇತ್ತು. ಆದರೆ, ಈ ವರ್ಷ ಕೇವಲ 41.2ಮೀ. ಮಳೆಯಾಗಿದೆ. ಇದೇ ಕಾರಣಕ್ಕೆ ನೀರಿನ ಒಳ ಹರಿವು ಕೂಡ ಮಾರ್ಚ್‌ ಅಂತ್ಯಕ್ಕೇ ನಿಂತಿದ್ದು, ಸದ್ಯ 4.47ಮೀ.ನಷ್ಟು ಮಾತ್ರ ನೀರಿನ ಮಟ್ಟ ಇದೆ.

2017ರಲ್ಲಿ ತುಂಬೆ ನೀರಿನ ಮಟ್ಟ 4.18 ಮೀ. ಇತ್ತು. ಇದಾದ ಬಳಿಕ 2025ರ ವರೆಗೆ ಇಷ್ಟೊಂದು ಇಳಿಕೆ ಕಂಡಿರಲಿಲ್ಲ. ಆದರೆ, ಸದ್ಯ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ನೀರಿನ ಬಳಕೆಯೂ ಹೆಚ್ಚುತ್ತಿದೆ. ಮಂಗಳೂರು ನಗರಕ್ಕೆ ದಿನಂಪ್ರತಿ 160 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. ಈ ಪ್ರಮಾಣವನ್ನು ಲೆಕ್ಕ ಹಾಕಿದಾಗ 4 ಮೀ.ಎತ್ತರಕ್ಕೆ ನಿಲ್ಲಿಸಿದರೆ 5.21 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹ ಮಾಡಬಹುದಾಗಿದ್ದು 23 ದಿನಗಳವರೆಗೆ ನಗರಕ್ಕೆ ನೀರು ಪೂರೈಕೆ ಮಾಡಬಹುದು. 4.50 ಮೀ. ಎತ್ತರಕ್ಕೆ ಸಂಗ್ರಹಿಸಿದರೆ 6.40 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ ಮತ್ತು 30 ದಿನಗಳವರೆಗೆ ಪೂರೈಕೆ ಮಾಡಬಹುದು. 5 ಮೀ. ಎತ್ತರಕ್ಕೆ ನೀರು ನಿಲ್ಲಿಸಿದರೆ 7.71 ಮಿಲಿಯನ್ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗುತ್ತದೆ. ಇದು 40 ದಿನಗಳವರೆಗೆ ಸಾಕಾಗುತ್ತದೆ. 5.50 ಮೀ. ಎತ್ತರಕ್ಕೆ ಸಂಗ್ರಹ ಮಾಡಿದರೆ 9.17 ಮಿಲಿಯನ್ ಕ್ಯುಬಿಕ್ ಮೀಟರ್‌ನೀರು ಸಂಗ್ರಹವಾಗುತ್ತದೆ. ಇದರಿಂದ 48 ದಿನಗಳವರೆಗೆ ನೀರು ಪೂರೈಕೆ ಮಾಡಬಹುದು. ಇಷ್ಟಾದರೂ ಎಎಂಆ‌ರ್. ಬಿಳಿಯೂರು ಮತ್ತು ಬಂಟ್ವಾಳದ ಜಕ್ರಿಬೆಟ್ಟು ಡ್ಯಾಂಗಳಲ್ಲಿ ನೀರುಸಂಗ್ರಹವಿರುವುದರಿಂದ ಸಮಸ್ಯೆಯ ತೀವ್ರತೆ ತಗ್ಗಲಿದೆ.

ಪಾಲಿಕೆ ಅಧಿಕೃತವಾಗಿ ಘೋಷಿಸಿದಂತೆ ಮೇ 1ರಿಂದ ಕುಡಿಯುವ ನೀರಿನ ರೇಷನಿಂಗ್ ಆರಂಭವಾಗಲಿದೆ. ಮಂಗಳೂರು ನಗರ-ಸುರತ್ಕಲ್ ಭಾಗಕ್ಕೆ ದಿನ ಬಿಟ್ಟು ದಿನ ನೀರು ಪೂರೈಕೆಯಾಗಲಿದೆ. ಮೇ ಅಂತ್ಯದಲ್ಲೇ ಮುಂಗಾರು ಆಗಮಿಸುವ ನಿರೀಕ್ಷೆ ಇದ್ದು, ಪೂರ್ವ ಮುಂಗಾರು ಕೂಡ ಇನ್ನಷ್ಟು ಬಿರುಸು ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಕೈಕೊಟ್ಟರೆ ಮಾತ್ರ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗೀತು.

ನೀರಿನ ಮಟ್ಟ ಇಳಿಯುತ್ತಿರುವುದರಿಂದ ನೀರಿನ ಮಿತ ಬಳಕೆ ಅನಿವಾರ್ಯ. ನೀರನ್ನು ಪೋಲು ಮಾಡದೆ, ಅಪವ್ಯಯವಾಗದಂತೆ ಮುಂಜಾಗ್ರತೆ ವಹಿಸಿ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲು ಹೆಚ್ಚು ಒತ್ತು ನೀಡಬೇಕು. ಕುಡಿಯುವ ನೀರು ಪ್ರಥಮ ಆದ್ಯತೆಯಾಗಿ ನೀಡಬೇಕಾದ ಹಿನ್ನೆಲೆಯಲ್ಲಿ ಮನೆಯಲ್ಲಿ ಕಾರು/ದ್ವಿಚಕ್ರ/ರಿಕ್ಷಾ/ಗಾರ್ಡನ್‌ಗಳಿಗೆ ಹಾಗೂ ಪ್ರಾಣಿಗಳನ್ನು ತೊಳೆಯಲು ನೀರು ಹೆಚ್ಚಾಗಿ ಬಳಕೆ ಮಾಡಬಾರದು.


Spread the love
Subscribe
Notify of

0 Comments
Inline Feedbacks
View all comments