ಪರಿಶಿಷ್ಟ ಜಾತಿಯ ಪುರುಷರಿಗೂ ಮೀಸಲಾತಿಯಲ್ಲಿ ಪ್ರಾತಿನಿಧ್ಯ ಕಲ್ಪಿಸಿ: ಮಂಜುನಾಥ್ ಚೇರ್ಕಾಡಿ ಮನವಿ
ಉಡುಪಿ: ಉಡುಪಿ ಜಿಲ್ಲೆಯ ಏಳು ತಾಲೂಕು ಪಂಚಾಯತ್ಗಳು ಹಾಗೂ ಚೇರ್ಕಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಸ್ಥಾನಗಳನ್ನು ಮಹಿಳೆಯರಿಗೆ ಮಾತ್ರ ಮೀಸಲಿಡುವುದರಿಂದ ಪುರುಷರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಪುರುಷರಿಗೂ ಪ್ರಾತಿನಿಧ್ಯ ಕಲ್ಪಿಸುವಂತೆ ಕಾಯ್ದೆಗೆ ತಿದ್ದುಪಡಿ ತಂದು ಮೀಸಲಾತಿ ನಿಯಮಗಳನ್ನು ಮರುರೂಪಿಸಬೇಕು ಎಂದು ದಲಿತ ಸಮುದಾಯದ ನಾಯಕ ಮಂಜುನಾಥ್ ಚೇರ್ಕಾಡಿ ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ, ಕಾಪು, ಬೈಂದೂರು, ಉಡುಪಿ, ಕಾರ್ಕಳ, ಕುಂದಾಪುರ ಮತ್ತು ಹೆಬ್ರಿ ತಾಲೂಕುಗಳಲ್ಲಿ ಪರಿಶಿಷ್ಟ ಜಾತಿಗೆ ತಲಾ ಒಂದು ಸ್ಥಾನ ಮೀಸಲಿಡಲಾಗಿದೆ. ಆದರೆ, ಈ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿರುವುದರಿಂದ ಪರಿಶಿಷ್ಟ ಜಾತಿಯ ಪುರುಷರಿಗೆ ಮೀಸಲಾತಿಯಡಿ ಸ್ಪರ್ಧಿಸಲು ಅವಕಾಶವಿಲ್ಲದಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಚೇರ್ಕಾಡಿ ಗ್ರಾಮ ಪಂಚಾಯತ್ನ ಒಟ್ಟು 16 ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ ಒಂದು ಸ್ಥಾನ ಮೀಸಲಾಗಿದ್ದು, ಅದನ್ನೂ ಮಹಿಳೆಯರಿಗೆ ಮೀಸಲಿಡಲಾಗಿದೆ. ಇದರಿಂದ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಎರಡೂ ಹಂತಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯ ಪುರುಷರಿಗೆ ಮೀಸಲಾತಿಯಡಿ ಸ್ಪರ್ಧಿಸುವ ಅವಕಾಶ ದೊರೆಯುತ್ತಿಲ್ಲ ಎಂದು ಮಂಜುನಾಥ್ ಹೇಳಿದ್ದಾರೆ.
ಈ ವ್ಯವಸ್ಥೆಯಿಂದ ಪರಿಶಿಷ್ಟ ಜಾತಿಯ ಪುರುಷರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಸಮುದಾಯದ ಪ್ರತಿಭಾವಂತ ಪುರುಷರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಸಿಗದಂತಾಗಿದೆ. ಇದರಿಂದ ಮಹಿಳೆಯರು ಮತ್ತು ಪುರುಷರ ನಡುವೆ ಪ್ರಾತಿನಿಧ್ಯದಲ್ಲಿ ಅಸಮಾನತೆ ಉಂಟಾಗಿದ್ದು, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಈ ವಿಷಯವನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದನ್ನು ವಿರೋಧಿಸುವುದಿಲ್ಲ. ಆದರೆ, ಮಹಿಳಾ ಮೀಸಲಾತಿಯ ಕಾರಣದಿಂದ ಪರಿಶಿಷ್ಟ ಜಾತಿಯ ಪುರುಷರಿಗೆ ಪ್ರಾತಿನಿಧ್ಯವೇ ಇಲ್ಲದಂತಾಗುವುದು ಸಮರ್ಥನೀಯವಲ್ಲ. ಆದ್ದರಿಂದ ಕಾಯ್ದೆಗೆ ಅಗತ್ಯ ತಿದ್ದುಪಡಿ ತಂದು, ಮಹಿಳೆಯರಂತೆ ಪರಿಶಿಷ್ಟ ಜಾತಿಯ ಪುರುಷರಿಗೂ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ದೊರೆಯುವಂತೆ ಮೀಸಲಾತಿ ನಿಯಮಾವಳಿಗಳನ್ನು ಮರುರೂಪಿಸಬೇಕು ಎಂದು ಮಂಜುನಾಥ್ ಚೇರ್ಕಾಡಿ, ಆದಿ ದ್ರಾವಿಡ ಸಮುದಾಯದ ಪರವಾಗಿ ಮನವಿ ಮಾಡಿದ್ದಾರೆ.













