ಪ್ರತಾಪ್ ಸಿಂಹ ಹೇಳಿಕೆಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಆಕ್ರೋಶ
ಮಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಆಡಳಿತ ಭಾಷೆಯಾಗಿ ಮಾನ್ಯತೆ ನೀಡಿ ತುಳುನಾಡಿನ ಜನರ ಸ್ವಾಭಿಮಾನ ಹಾಗೂ ಭಾವನೆಗಳಿಗೆ ಗೌರವ ನೀಡಿದೆ. ಆದರೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು “ಇದರಿಂದ ಲಾಭವೇನು?” ಎಂದು ಪ್ರಶ್ನಿಸುವ ಮೂಲಕ ತುಳುನಾಡಿನ ಜನರಿಗೆ ಅಪಮಾನ ಮಾಡಿದ್ದಾರೆ.
ಪ್ರತಾಪ್ ಸಿಂಹ ಅವರು ತಕ್ಷಣವೇ ತುಳು ಜನರ ಕ್ಷಮೆಯಾಚಿಸಬೇಕು ಹಾಗೂ ಜಿಲ್ಲೆಯ ಬಿಜೆಪಿ ನಾಯಕರು ಅವರಿಗೆ ಸೂಕ್ತ ಬುದ್ಧಿವಾದ ಹೇಳಬೇಕು ಎಂದು ಒತ್ತಾಯಿಸಿದರು.
ಮಂಗಳೂರಿನಲ್ಲಿ ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ₹16,000 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಘೋಷಿಸಿದೆ. ಮಂಗಳೂರನ್ನು ಹೂಡಿಕೆದಾರರ ಕೇಂದ್ರವಾಗಿಸಲು ‘ಇನ್ವೆಸ್ಟರ್ಸ್ ಮೀಟ್’ ಹಾಗೂ ಆಸ್ಪತ್ರೆ, ರಸ್ತೆ, ಬಂದರುಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆದರೆ ಈ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಬಿಜೆಪಿ ನಾಯಕರು ಕೇವಲ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಹಾಗೂ ನಾಯಕರು ರಾಜ್ಯದ ಹಕ್ಕಿನ ತೆರಿಗೆ ಪಾಲಿಗಾಗಿ ಕೇಂದ್ರದ ವಿರುದ್ಧ ಧ್ವನಿ ಎತ್ತದೆ ಮೌನವಾಗಿದ್ದಾರೆ. ಆ ಕೆಲಸ ಮೊದಲು ಮಾಡಲಿ ಎಂದು ಆಗ್ರಹಿಸಿದರು.
ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಉಚಿತ ಕೊಡುಗೆಗಳೆಂದು ಅಪಹಾಸ್ಯ ಮಾಡಿದ ಬಿಜೆಪಿ ನಾಯಕರು, ಅದೇ ಯೋಜನೆಗಳನ್ನು ಬೇರೆ ರಾಜ್ಯಗಳಲ್ಲಿ ಕಾಪಿ ಮಾಡಿ ‘ಮೋದಿ ಗ್ಯಾರಂಟಿ’ ಹೆಸರಿನಲ್ಲಿ ಪ್ರಚಾರ ಮಾಡುತ್ತಾರೆ. ಆದರೆ ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಬಡವರಿಗೆ ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.













