ಬಂಟ್ವಾಳ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹1.05 ಕೋಟಿ ಮೌಲ್ಯದ ಮಾದಕವಸ್ತು ವಶ; ಓರ್ವ ಆರೋಪಿ ಬಂಧನ

Spread the love

ಬಂಟ್ವಾಳ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹1.05 ಕೋಟಿ ಮೌಲ್ಯದ ಮಾದಕವಸ್ತು ವಶ; ಓರ್ವ ಆರೋಪಿ ಬಂಧನ

ಬಂಟ್ವಾಳ: ಹಾಸನದಿಂದ ಮಂಗಳೂರಿಗೆ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ 538.63 ಗ್ರಾಂ MDMA, 99.12 ಗ್ರಾಂ ಕೊಕೈನ್ ಸೇರಿದಂತೆ ಒಟ್ಟು ₹1,05,59,450 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆ.16ರಂದು ರಾತ್ರಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಟಿ. ಅವರಿಗೆ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಮಾದಕವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು.

ಮಾಹಿತಿ ಆಧರಿಸಿ ಪೊಲೀಸರು ಸಿಬ್ಬಂದಿಯೊಂದಿಗೆ ತಡರಾತ್ರಿ KA-01-MA-1284 ನೋಂದಣಿಯ ಕಾರನ್ನು ತಡೆದು ಪರಿಶೀಲನೆ ನಡೆಸಿದರು. ಕಾರು ಚಾಲಕನಾಗಿದ್ದ ಬೆಂಗಳೂರು ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಎಂಬಾತನನ್ನು ವಿಚಾರಣೆ ನಡೆಸಿದಾಗ, ಕಾರಿನಲ್ಲಿ ಮಾದಕವಸ್ತು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಬಳಿಕ ಕಾರನ್ನು ಪರಿಶೀಲಿಸಿದಾಗ 538.63 ಗ್ರಾಂ MDMA ಹಾಗೂ 99.12 ಗ್ರಾಂ ಕೊಕೈನ್, ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ ಸೇರಿದಂತೆ ಇತರ ಸೊತ್ತುಗಳು ಪತ್ತೆಯಾಗಿವೆ.

ವಶಪಡಿಸಿಕೊಂಡ MDMAಯ ಅಂದಾಜು ಮೌಲ್ಯ ₹53,86,300 ಹಾಗೂ ಕೊಕೈನ್‌ನ ಮೌಲ್ಯ ₹49,56,000 ಎಂದು ಅಂದಾಜಿಸಲಾಗಿದೆ. ಇತರ ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ಸೇರಿದಂತೆ ಒಟ್ಟು ₹1,05,59,450 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


Spread the love
Subscribe
Notify of

0 Comments