ಬಂಟ್ವಾಳದಲ್ಲಿ ಅಕ್ರಮ ಮರಳುಗಾರಿಕೆ: 3 ಟಿಪ್ಪರ್ ಲಾರಿ, ಜೆಸಿಬಿ ವಶ

Spread the love

ಬಂಟ್ವಾಳದಲ್ಲಿ ಅಕ್ರಮ ಮರಳುಗಾರಿಕೆ: 3 ಟಿಪ್ಪರ್ ಲಾರಿ, ಜೆಸಿಬಿ ವಶ

ಬಂಟ್ವಾಳ: ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ತೆಗೆದು ಟಿಪ್ಪರ್ ಲಾರಿಗಳಿಗೆ ತುಂಬಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಮೂರು ಟಿಪ್ಪರ್ ಲಾರಿ ಹಾಗೂ ಒಂದು ಜೆಸಿಬಿ ವಾಹನವನ್ನು ವಶಪಡಿಸಿಕೊಂಡ ಘಟನೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಕೆಳಗಿನ ತುಂಬೆಯಲ್ಲಿ ಸೆಪ್ಟೆಂಬರ್ 25ರಂದು ಮುಂಜಾನೆ ನಡೆದಿದೆ.

ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ತೆಗೆದು ಲಾರಿಗಳಿಗೆ ತುಂಬಿಸುತ್ತಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರನ್ನಗೌಡ ಪಾಟೀಲ ಅವರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮೂರು ಟಿಪ್ಪರ್ ಲಾರಿ ಹಾಗೂ ಒಂದು ಜೆಸಿಬಿ ವಾಹನ ಪತ್ತೆಯಾಗಿದ್ದು, ಅವುಗಳಲ್ಲಿ ಅಕ್ರಮವಾಗಿ ಮರಳು ತುಂಬಿರುವುದು ಕಂಡುಬಂದಿದೆ.

ಪೊಲೀಸರು ದಾಳಿ ನಡೆಸಿ ಸ್ಥಳದಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಮರಳು ತುಂಬಿದ್ದ KA-06-D-8454, KA-19-AF-9094 ಹಾಗೂ KA-19-AB-1508 ನೋಂದಣಿ ಸಂಖ್ಯೆಯ ಮೂರು ಟಿಪ್ಪರ್ ಲಾರಿಗಳು ಮತ್ತು KA-20-N-7175 ನೋಂದಣಿ ಸಂಖ್ಯೆಯ ಜೆಸಿಬಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಇದರೊಂದಿಗೆ ಸುಮಾರು ಎರಡು ಲೋಡ್ ಮರಳು ಹಾಗೂ ಮರಳು ಲೋಡ್ ಮಾಡಲು ಬಳಸುತ್ತಿದ್ದ ಇತರ ಸಾಮಗ್ರಿಗಳನ್ನೂ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಾಹನಗಳು, ಮರಳು ಹಾಗೂ ಇತರ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ 25,24,700 ರೂ. ಎಂದು ತಿಳಿಸಲಾಗಿದೆ.

ವಿಚಾರಣೆ ವೇಳೆ ನದಿ ಕಿನಾರೆಯಿಂದ ಯಾವುದೇ ಅನುಮತಿ ಪಡೆಯದೆ ಮರಳನ್ನು ಅಕ್ರಮವಾಗಿ ಸಂಗ್ರಹಿಸಿ, ಲಾರಿಗಳಿಗೆ ಲೋಡ್ ಮಾಡಿ ಸಾಗಿಸುತ್ತಿರುವುದಾಗಿ ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ನಿಹಾನ್, ರಾಜೀಕ್, ಮೊಹಮ್ಮದ್ ಶಂಶೀರ್, ಮಹಮ್ಮದ್ ಅಶ್ರಫ್, ಸ್ಟೀವನ್ ಡಿಸೋಜಾ ಸೇರಿದಂತೆ ಕೃತ್ಯಕ್ಕೆ ಸಹಕರಿಸಿದರೆಂದು ಆರೋಪಿಸಲಾದ ರೈಟರ್ ಶಿವಪ್ರಸಾದ್ ಆಳ್ವ ಹಾಗೂ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 129/2026ರಂತೆ ಪ್ರಕರಣ ದಾಖಲಾಗಿದೆ.

ಆರೋಪಿಗಳ ವಿರುದ್ಧ KMMC Rules-1994ರ ಕಲಂ 42, 43, 44, MMRD Actನ ಕಲಂ 4(1), 4(1A), 21(1), 21(1A) ಹಾಗೂ ಬಿಎನ್‌ಎಸ್‌-2023ರ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Subscribe
Notify of

0 Comments