ಮಂಗಳೂರಿನ ಕದ್ರಿ ಯುದ್ಧ ಸ್ಮಾರಕದಲ್ಲಿ ‘ಟಿ-55 ಯುದ್ಧ ಟ್ಯಾಂಕ್’ ಅನಾವರಣ

Spread the love

ಮಂಗಳೂರಿನ ಕದ್ರಿ ಯುದ್ಧ ಸ್ಮಾರಕದಲ್ಲಿ ‘ಟಿ-55 ಯುದ್ಧ ಟ್ಯಾಂಕ್’ ಅನಾವರಣ

ಮಂಗಳೂರು : ಭಾರತ-ಪಾಕಿಸ್ತಾನ 1971ರ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಭಾರತೀಯ ಸೇನೆಯ ಐತಿಹಾಸಿಕ ‘ಟಿ-55’ ಯುದ್ಧ ಟ್ಯಾಂಕ್ ಅನ್ನು ಮಂಗಳೂರಿನ ಕದ್ರಿ ಹಿಲ್ಸ್‌ನ ಯುದ್ಧ ಸ್ಮಾರಕದ ಬಳಿ ರವಿವಾರ ಅಧಿಕೃತವಾಗಿ ಅನಾವರಣಗೊಳಿಸಲಾಯಿತು.

ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘‘1971ರ ಯುದ್ಧದಲ್ಲಿ ಪಾಲ್ಗೊಂಡಿದ್ದ, ಸೇವಾಮುಕ್ತಗೊಳಿಸಲಾದ ಟಿ-55 ಯುದ್ಧ ಟ್ಯಾಂಕ್ ಅನ್ನು ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಇಲ್ಲಿ ಅನಾವರಣಗೊಳಿಸಲಾಗಿದೆ.ಈ ಯುದ್ಧ ಟ್ಯಾಂಕ್ ಭಾರತೀಯ ಸೇನೆಯ ಯೋಧರ ಶೌರ್ಯ, ತ್ಯಾಗ ಮತ್ತು ಸೇವೆಯ ಸಂಕೇತವಾಗಿ ನಿಂತಿದೆ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕರು ಈ ಸ್ಥಳಕ್ಕೆ ಭೇಟಿ ನೀಡಿ ಸಶಸ್ತ್ರ ಪಡೆಗಳ ಪರಂಪರೆ ಮತ್ತು ಸಂಪ್ರದಾಯಗಳಿಂದ ಪ್ರೇರಣೆ ಪಡೆಯಬೇಕೆಂದು ಅವರು ವಿನಂತಿಸಿಕೊಂಡರು.

1971 ಬಾಂಗ್ಲಾವಿಮೋಚನಾ ಯುದ್ಧದಲ್ಲಿ ಮತ್ತು ಐಪಿಕೆಎಫ್‌ನ ಶ್ರೀಲಂಕಾದ ಕಾರ್ಯಾಚರಣೆಯ ಮುಂಚೋಣಿ ನೆಲೆಗಳಲ್ಲಿ ಪಾಲ್ಗೊಂಡಿದ್ದ ನಿವೃತ್ತ ಹಿರಿಯ ಸೇನಾಧಿಕಾರಿ ಬ್ರಿಗೇಡಿಯರ್ ಐಎನ್ ರೈ ತಮ್ಮ ಅನುಭವಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. ದಕ್ಷಿಣ ಕನ್ನಡ ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ಎನ್. ಶರತ್ ಭಂಡಾರಿ ಕಾರ್ಗಿಲ್ ಯುದ್ಧದ ಮಾಹಿತಿ ನೀಡಿದರು.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಇದೇ ಸಂದರ್ಭದಲ್ಲಿ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.

ಉಪಾಧ್ಯಕ್ಷ ಕರ್ನಲ್ ಎ.ಕೆ. ಜಯಚಂದ್ರನ್ ಹಾಗೂ ಕೋಶಾಧಿಕಾರಿ ಸಿಪಿಒ ಸುಧೀರ್ ಪೈ , ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಶಾಸಕ ಡಿ.ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಹಾಗೂ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಶ್ರೀಕಾಂತ್ ಶೆಟ್ಟಿ ಬಾಳ ಸ್ವಾಗತಿಸಿದರು. ಕಾರ್ಯದರ್ಶಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ ವಂದಿಸಿದರು. ಪಿಒ ವಿಕ್ರಂ ದತ್ ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments