ಮಂಗಳೂರು:  ಶತಮಾನದಷ್ಟು ಹಳೆಯ ಹಾಸ್ಟೆಲ್ ಕಟ್ಟಡ ನೆಲಸಮ

Spread the love

ಮಂಗಳೂರು:  ಶತಮಾನದಷ್ಟು ಹಳೆಯ ಹಾಸ್ಟೆಲ್ ಕಟ್ಟಡ ನೆಲಸಮ

ಮಂಗಳೂರು: ಶತಮಾನ ಕಂಡ ಪಾರಂಪರಿಕ ಕಟ್ಟಡವೊಂದು ಇದೀಗ ಕಲ್ಲು-ಮಣ್ಣಿನ ರಾಶಿಯಾಗಿ ಮಾರ್ಪಟ್ಟಿದೆ.. ನಗರದ ಹೃದಯಭಾಗದ ಮಣ್ಣಗುಡ್ಡೆಯಲ್ಲಿರುವ ಗೋಕರ್ಣನಾಥೇಶ್ವರ ಕಾಲೇಜಿನ ಆವರಣದಲ್ಲಿ ಸೂಟರ್ ಹಾಸ್ಟೆಲ್ ಕಟ್ಟಡವನ್ನು ನೆಲಸಮ ಮಾಡುವ ಮೂಲಕ ಪಾರಂಪರಿಕ ಕಟ್ಟಡವೊಂದು ಧರಾಶಾಹಿಯಾಗಿದೆ. ಪಾರಂಪರಿಕ ತಾಣವಾಗಿ ಉಳಿಸಬೇಕಾಗಿದ್ದ ಐತಿಹಾಸಿಕ ಕುರುಹು ಇದೀಗ ಅವಶೇಷವಾಗಿ ಉಳಿದಿದೆ. ಬ್ರಿಟಿಷರ ಅವಧಿಯ ಈ ಹಾಸ್ಟೆಲ್ 70ರ ದಶಕದಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೆ ಆ ಭವ್ಯ ಕಟ್ಟಡವು ಗತಕಾಲದ ವೈಭವಕ್ಕೆ ಮೂಕ ಸಾಕ್ಷಿಯಾಗಿತ್ತು. ಕುಂದಾಪುರದಿಂದ ಕಾಸರಗೋಡು ಅಥವಾ ಬೆಳ್ತಂಗಡಿವರೆಗಿನ ದೂರದ ಊರುಗಳಿಂದ ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದ ನೂರಾರು ಬಿಲ್ಲವ ಯುವಕರಿಗೆ ಆಶ್ರಯ ಮತ್ತು ಸರ್ವತೋಮುಖ ಪೋಷಣೆ ನೀಡಲು 1926ರಲ್ಲಿ ಸೂಟರ್ ಹೆಸರಲ್ಲಿ ಈ ಹಾಸ್ಟೆಲ್ ನಿರ್ಮಾಣವಾಗಿತ್ತು.

ಶ್ರೀ ವೆಂಕಟೇಶ್ವರ ಶಿವಭಕ್ತಿ ಯೋಗ ಸಂಘದ ಸಂಸ್ಥಾಪಕ ಅಧ್ಯಕ್ಷ ಸೌಕಾರ್ ಧೂಮಪ್ಪ ಕಾಂಟ್ರಾಕ್ಟರ್ ಅವರ ವಂಶಸ್ಥರು ಈ ಪಾರಂಪರಿಕ ಕಟ್ಟಡದ ಧ್ವಂಸದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಸಂಘದ ಆಡಳಿತ ಮಂಡಳಿಯು ಹಳೆಯ ಕಟ್ಟಡವನ್ನು ಪುನಃಸ್ಥಾಪಿಸಿ, ಸಂಸ್ಥಾಪಕರು ಮತ್ತು ಸಂಸ್ಥಾಪಕ ಪಿತಾಮಹರ ಹೆಸರಿನಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಬಳಸಿದ್ದರೆ ಅದೊಂದು ಸೂಕ್ತ ಗೌರವವಾಗುತ್ತಿತ್ತು ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಧೂಮಪ್ಪ ಕಾಂಟ್ರಾಕ್ಟರ್ ಅವರ ಮೊಮ್ಮಕ್ಕಳಾದ ನರೇಂದ್ರ ಕುಮಾರ್ ಮತ್ತು ವಾಣಿ ಭವಿಶಿ ಅವರು, ನೂರು ವರ್ಷಗಳ ಹಿಂದೆ ಸೂಟರ್ ಹಾಸ್ಟೆಲ್ ಸ್ಥಾಪನೆಯ ಕನಸು ಕಂಡ ಹತ್ತು ಟ್ರಸ್ಟಿಗಳ ಗೌರವಾರ್ಥವಾಗಿ ಯಾವುದಾದರೂ ಸಾರ್ವಜನಿಕ ಬಳಕೆಯ ಸಂಸ್ಥೆಯನ್ನು ಪುನರ್ ನಿರ್ಮಿಸುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ.

ಸೂಟರ್ ಹಾಸ್ಟೆಲ್‌ಗಾಗಿ ಜಮೀನನ್ನು ಅಂದಿನ ಕಲೆಕ್ಟರ್ ಸಿ. ಎಸ್. ಸೂಟರ್ ಅವರು ಮಂಜೂರು ಮಾಡಿದ್ದರು ಮತ್ತು ಅದು ಧೂಮಪ್ಪ ಕಾಂಟ್ರಾಕ್ಟರ್ ಅವರ ಪತ್ನಿ ಕಮಲಾ ಬಾಯಿ ಅವರ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಅಧಿಕೃತ ದಾಖಲೆಗಳು ಇನ್ನೂ ಅವರ ಹೆಸರಿನಲ್ಲಿಯೇ ಇದ್ದರೂ, ಕುಟುಂಬವು ಆ ಆಸ್ತಿಯ ಮೇಲೆ ಯಾವುದೇ ಹಕ್ಕು ಮಂಡಿಸಿಲ್ಲ.

ಸಂಘದ ಬ್ಯಾನರ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಆಡಳಿತ ಮಂಡಳಿಯು ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು ಯಾವಾಗ ಬೇಕಾದರೂ ಕುಸಿಯಬಹುದಿತ್ತು ಎಂದು ಹೇಳಿ ಧ್ವಂಸವನ್ನು ಸಮರ್ಥಿಸಿಕೊಂಡಿದೆ.

‘ಕಟ್ಟಡ ಮತ್ತು ಅದರ ಪಕ್ಕದ ಕಟ್ಟಡವನ್ನು ಕೆಡವಿ ಸಾರ್ವಜನಿಕ ಬಳಕೆಗೆ ಫೂರಕವಾಗಿ ಏನಾದರೂ ನಿರ್ಮಿಸಲು ನಾವು ನಿರ್ಧರಿಸಿದ್ದೇವೆ. ಸಂಘದ ಸಂಸ್ಥಾಪಕ ಪಿತಾಮಹರ ಕೊಡುಗೆಗಳನ್ನು ಸೂಕ್ತವಾಗಿ ಸ್ಮರಿಸಲಾಗುವುದು’ ಎಂದು ಶ್ರೀ ವೆಂಕಟೇಶ್ವರ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷ ಡಾ. ಬಿ. ಜಿ. ಸುವರ್ಣ ಹೇಳಿದ್ದಾರೆ.


Spread the love
Subscribe
Notify of

0 Comments