ವೇಣೂರು: ಕೋಳಿ ಅಂಕಕ್ಕೆ ಪೊಲೀಸರ ದಾಳಿ; ನಾಲ್ವರು ವಶಕ್ಕೆ, 7 ಅಂಕದ ಕೋಳಿಗಳು ಜಪ್ತಿ
ವೇಣೂರು: ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ವೇಣೂರು ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಏಳು ಅಂಕದ ಕೋಳಿಗಳು, ಮೂರು ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋರಿಕ್ಷಾವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಅಕ್ಟೋಬರ್ 18ರಂದು ಮಧ್ಯಾಹ್ನ ಅಂಡಿಂಜೆ ಗ್ರಾಮದ ಕಾಣಲಚ್ಚಿ ಎಂಬಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸಲಾಗುತ್ತಿದೆ ಎಂಬ ಮಾಹಿತಿ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ಕಾ. ಮತ್ತು ಸು.) ಅಕ್ಷಯ ಡವಗಿ ಅವರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹಣದ ಪಣದೊಂದಿಗೆ ಕೋಳಿ ಅಂಕ ನಡೆಸುತ್ತಿರುವುದು ದೃಢಪಟ್ಟಿದೆ.
ಪೊಲೀಸರು ದಾಳಿ ನಡೆಸಿದಾಗ ಅಲ್ಲಿದ್ದ ಆರೋಪಿಗಳ ಪೈಕಿ ಕೆಲವರು ಪರಾರಿಯಾಗಿದ್ದು, ನಾಲ್ವರನ್ನು ಹಿಡಿದು ವಿಚಾರಣೆ ನಡೆಸಿದಾಗ ಅವರು ಮೋಹನ ಗೌಡ (45), ದಿನೇಶ್ (45), ಪ್ರಶಾಂತ (35) ಹಾಗೂ ಧೀರಜ್ ಎಂದು ತಿಳಿದುಬಂದಿದೆ.
ಸ್ಥಳದಲ್ಲಿದ್ದ ಏಳು ಅಂಕದ ಕೋಳಿಗಳು, ಮೂರು ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.













