ಅಕ್ಷರದಾಸೋಹ ನೌಕರರ ವೇತನ ಏರಿಕೆಗಾಗಿ CITU ಒತ್ತಾಯ

ಅಕ್ಷರದಾಸೋಹ ನೌಕರರ ವೇತನ ಏರಿಕೆಗಾಗಿ CITU  ಒತ್ತಾಯ

ಮಂಗಳೂರು: ನಿರಂತರ ಹೋರಾಟ ನಡೆಸಿದರೂ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಸು ಸರಕಾರ ಬರೀ ರೂ. 2,000/- ವೇತನ ನಿಗದಿಪಡಿಸಿ ನೌಕರರನ್ನು ದುಡಿಸುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಹಿಂದಿನ ಕಾಂಗ್ರೆಸ್ಸು ಸರಕಾರ ವೇತನ ಏರಿಕೆಯನ್ನು ರೂ. 1,000ದಷ್ಟು ಏರಿಕೆ ಮಾಡುವ ಭರವಸೆ ನೀಡಿದ್ದರೂ, ಈವರೆಗೂ ಜಾರಿಗೊಳಿಸಿಲ್ಲ. ಕೂಡಲೇ ಎರಡು ಸರಕಾರಗಳು ಅಕ್ಷರದಾಸೋಹ ನೌಕರರ ವೇತನ ಏರಿಕೆ ಮಾಡಬೇಕೆಂದು ಸಿಐಟಿಯು ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿಯವರು ಒತ್ತಾಯಿಸಿದರು.

ಅವರು ದಿನಾಂಕ 03-07-2016ರಂದು ನಗರದ ಸರಕಾರಿ ನೌಕರರ ಸಭಾಭವನದ ಕಾಂ| ಸರಸ್ವತಿ ವೇದಿಕೆಯಲ್ಲಿ ಜರುಗಿದ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ದಕ್ಷಿಣ ಕನ್ನಡ ಜಿಲ್ಲಾ 6ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

citu

ಅವರು ಮುಂದುವರಿಸುತ್ತಾ, ವಿದ್ಯಾರ್ಥಿಗಳ ಪೌಷ್ಠಿಕ ಆಹಾರಾಂಶ ಹೆಚ್ಚಿಸುವ ಆಹಾರ ತಯಾರು ಮಾಡುತ್ತಿರುವ ಬಿಸಿಯೂಟ ನೌಕರರ ಪೌಷ್ಟಿಕಾಂಶ ಹೆಚ್ಚಿಸುವರೇ ಅವರ ಗೌರವಧನ ಹೆಚ್ಚಿಸಲು ತಯಾರಿಲ್ಲ ಎಂದ ಅವರು ಬಿಸಿಯೂಟ ನೌಕರರು ತಮ್ಮ ಸಾಮಾಜಿಕ ಭದ್ರತೆ, ಕೆಲಸ ಭದ್ರತೆಗಾಗಿ ಸಂಘಟನೆಯನ್ನು ಬಲಿಷ್ಠಗೊಳಿಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಯಶೋಧರರವರು ಮಾತನಾಡುತ್ತಾ ಈ ಯೋಜನೆ ಸರಕಾರದ ಯೋಜನೆಯಾಗಿದ್ದು ವಿದ್ಯಾರ್ಥಿಗಳ ಜ್ಞಾನಾರ್ಜನಗೆ ಅನುಕೂಲವಾಗಿದೆ. ಇದನ್ನು ತಯಾರಿಸುವ ಬಿಸಿಯೂಟ ನೌಕರರ ಪ್ರಾಮುಖ್ಯತೆ ಕೂಡ ಅನನ್ಯ ಎಂದ ಅವರು, ಸರಕಾರಗಳ ಮುಂದುಗಡೆ ಬಿಸಿಯೂಟ ನೌಕರರ ಸಮಸ್ಯೆಗಳನ್ನು ಪರಿಹರಿಸಲು ನಡೆಸುವ ಎಲ್ಲಾ ಸಂಘಟನಾ ಕೆಲಸಗಳು ಕೂಡ ಬಿಸಿಯೂಟ ನೌಕರರ ಕೆಲಸದ ಪ್ರಜ್ಞೆ ಹಾಗೂ ಅವರ ಸೌಲಭ್ಯಗಳ ಬಗೆಗಿನ ಅರಿವನ್ನು ಹೆಚ್ಚಿಸುವುದು ಎಂದ ಅವರು ಇಲಾಖೆಯ ಸೌಲಭ್ಯಗಳನ್ನು ವಿವರಿಸಿದರು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು ವಹಿಸಿದ್ದರು. ವೇದಿಕೆಯಲ್ಲಿ ಸಿಐಟಿಯು ನಾಯಕರಾದ ರೋಬರ್ಟ್ ಡಿ’ಸೋಜ, ರಾಮಣ್ಣ ವಿಟ್ಲ, ವಿಜಯಲಕ್ಷ್ಮೀ, ಲತಾ, ಬಬಿತಾ, ಯಶೋಧಾ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಗಿರೀಜ ಮೂಡುಬಿದ್ರಿಯವರು ಸ್ವಾಗತಿಸಿ ಕೊನೆಯಲ್ಲಿ ಭವ್ಯ ಮುಚ್ಚೂರುರವರು ಧನ್ಯವಾದ ನೀಡಿದರು.

 ಪ್ರತಿನಿಧಿ ಕಲಾಪದಲ್ಲಿ ಶ್ರದ್ಧಾಂಜಲಿ ನಿರ್ಣಯವನ್ನು ಪ್ರಮೀಳಾ ಗುರುಪುರವರು ಮಂಡಿಸಿದರು, ಪ್ರಧಾನ ಕಾರ್ಯದರ್ಶಿ ಗಿರಿಜ ಮೂಡುಬಿದ್ರಿಯವರು ಮೂರು ವರ್ಷಗಳ ಚಟುವಟಿಕಾ ವರದಿಯನ್ನು ಮಂಡಿಸಿದರು. ಲೆಕ್ಕಪತ್ರವನ್ನು ಖಜಾಂಚಿ ಭವ್ಯ ಮುಚ್ಚೂರುರವರು ಮಂಡಿಸಿದರು, ಪ್ರತಿನಿಧಿಗಳ ಚರ್ಚೆಯ ಬಳಿಕ ಅಂಗೀಕರಿಸಲಾಯಿತು. ನೌಕರರ ವೇತನ ಹಾಗೂ ಸಮಾಜಿಕ ಭದ್ರತೆಯ ಹೋರಾಟದ ನಿರ್ಣಯವನ್ನು ಕೈಗೊಳ್ಳಲಾಯಿತು. ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್ ಬಜಾಲ್, ಎಒSನ ಮುಂದಾಳು ವಿಲಾಸಿನಿ ತೊಕ್ಕೊಟ್ಟುರವರು ಶುಭಾಶಯ ಭಾಷಣ ಮಾಡಿದರು.

ಪದ್ಮಾವತಿ ಶೆಟ್ಟಿ ಅಧ್ಯಕ್ಷರಾಗಿ, ಗಿರಿಜ ಮೂಡುಬಿದ್ರಿ ಪ್ರಧಾನ ಕಾರ್ಯದರ್ಶಿಯಾಗಿ, ಭವ್ಯ ಮುಚ್ಚೂರುರವರು ಖಜಾಂಚಿಯಾಗಿರುವ 13 ಮಂದಿಯ ಪದಾಧಿಕಾರಿಗಳು ಹಾಗೂ 17 ಮಂದಿಯ ಜಿಲ್ಲಾ ಸಮಿತಿಯನ್ನು ಸಮ್ಮೇಳನವು ಆಯ್ಕೆ ಮಾಡಿತು. CITU ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಸಮಾರೋಪ ಭಾಷಣ ಮಾಡಿದರು. ಬಬಿತಾ ಉಳ್ಳಾಲರವರು ಧನ್ಯವಾದ ನೀಡಿದರು.

Leave a Reply

Please enter your comment!
Please enter your name here