ಆಸ್ಕರ್, ಜೈರಾಮ್, ರಾಮಮೂರ್ತಿ, ನಿರ್ಮಲಾ ರಾಜ್ಯ ಸಭೆಗೆ ಪ್ರವೇಶ, ಜೆಡಿಎಸ್ ಗೆ ಮುಖಭಂಗ

ಬೆಂಗಳೂರು (ವಾಭಾ) : ನಿರೀಕ್ಷೆಯಂತೆ ಕಾಂಗ್ರೆಸ್‌ನ ಆಸ್ಕರ್ ಫೆರ್ನಾಂಡೀಸ್, ಜೈರಾಮ್ ರಮೇಶ್, ಕೆ.ಸಿ.ರಾಮಮೂರ್ತಿ ಹಾಗೂ ಕೇಂದ್ರ ಸಚಿವೆ ಹಾಗೂ ಬಿಜೆಪಿಯ ನಿರ್ಮಲಾ ಸೀತಾರಾಮನ್ ಜಯಭೇರಿ ಬಾರಿಸಿದ್ದಾರೆ. ಜೆಡಿಎಸ್‌ಗೆ ನಿರೀಕ್ಷೆಯಂತೆ ಬಾರೀ ಮುಖಭಂಗವಾಗಿದ್ದು, ಹೀನಾಯವಾಗಿ ಸೋಲುಂಡಿದ್ದಾರೆ.

ಪಡೆದ ಮತಗಳ ವಿವರ

ಆಸ್ಕರ್‌ ಫೆರ್ನಾಂಡಿಸ್‌ (ಕಾಂಗ್ರೆಸ್) 46

ಜೈರಾಂ ರಮೇಶ್ (ಕಾಂಗ್ರೆಸ್) 46

ಕೆ.ಸಿ.ರಾಮಮೂರ್ತಿ (ಕಾಂಗ್ರೆಸ್) 52

ಬಿಜೆಪಿಯ ನಿರ್ಮಲಾ ಸೀತಾರಾಮನ್ (ಬಿಜೆಪಿ) 47

ಬಿ.ಎಂ. ಫಾರೂಕ್ (ಜೆಡಿಎಸ್) 33

ಕೆ.ಸಿ. ರಾಮಮೂರ್ತಿಗೆ ಗರಿಷ್ಠ ಮತಗಳು

ಮೂರನೇ ಅಭ್ಯರ್ಥಿ, ಕಾಂಗ್ರೆಸ್‌ನ ರಾಮಮೂರ್ತಿ ಅವರಿಗೆ 52, ಆಸ್ಕರ್‌ ಫೆರ್ನಾಂಡಿಸ್ ಹಾಗೂ ಜೈರಾಂ ರಮೇಶ್ ತಲಾ 46, ನಿರ್ಮಲಾ ಸೀತಾರಾಮನ್ 47, ಜೆಡಿಎಸ್‌ನ ಬಿ.ಎಂ. ಫಾರೂಕ್ 33 ಮತಗಳನ್ನಷ್ಟೇ ಪಡೆಯಲು ಸಾಧ್ಯವಾಯಿತು. ಮಾಜಿ ಪೊಲೀಸ್ ಅಧಿಕಾರಿ ರಾಮಮೂರ್ತಿ ಎಲ್ಲರಿಗಿಂತ ಹೆಚ್ಚು ಮತಗಳಿಸುವ ಮೂಲಕ ಅಧಿಕೃತ ಅಭ್ಯರ್ಥಿಗಳನ್ನು ಹಿಂದಿಕ್ಕಿ ಅಖಾಡದಲ್ಲಿ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ.

ಇತ್ತೀಚಿನ ದಿನಗಳಲ್ಲೇ ಜೆಡಿಎಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಮುಖಭಂಗವಾಗಿದೆ. ಉದ್ಯಮಿಯೊಬ್ಬರನ್ನು ರಾಜ್ಯಸಭೆಗೆ ಕಳುಹಿಸುವ ಜೆಡಿಎಸ್ ವರಿಷ್ಠರ ಆಸೆ ನುಚ್ಚು ನೂರಾಗಿದೆ. ನಿರೀಕ್ಷೆಯಂತೆ ಜೆಡಿಎಸ್ ಅಭ್ಯರ್ಥಿ ಫಾರೂಕ್ ಹೀನಾಯ ಸೋಲುಂಡಿದ್ದು ಆ ಮೂಲಕ ಚುನಾವಣೆಯ ಅಗ್ನಿ ಪರೀಕ್ಷೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗೆದ್ದಿದ್ದು, ಭಿನ್ನಮತೀಯ ಕಾಂಗ್ರೆಸ್ಸಿಗರ ಬೆಂಬಲ ಪಡೆದು ಕಾಂಗ್ರೆಸ್‌ಗೆ ತಿರುಗೇಟು ಕೊಡುವ ನಿರೀಕ್ಷೆ ಮೂಡಿಸಿದ್ದ ಜೆಡಿಎಸ್‌ನ ಕುಮಾರಸ್ವಾಮಿ ನಿರಾಸೆ ಅನುಭವಿಸಿದ್ದಾರೆ.

ಕುತೂಹಲಕರ ಸಂಗತಿ ಎಂದರೆ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ಐದು ಮಂದಿ ಶಾಸಕರು ಕೈ ಕೊಟ್ಟಿದ್ದರೆ,ರಾಜ್ಯಸಬೆ ಚುನಾವಣೆಯಲ್ಲಿ ಜೆಡಿಎಸ್‌ನ ಎಂಟು ಮಂದಿ ಶಾಸಕರು ಉಲ್ಟಾ ಹೊಡೆದಿದ್ದು ಆ ಮೂಲಕ ಜೆಡಿಎಸ್ ಶಕ್ತಿ ಮತ್ತಷ್ಟು ಕುಗ್ಗಿದಂತಾಗಿದೆ.
ಮತಗಟ್ಟೆಯಲ್ಲಿ ಜೆಡಿಎಸ್ ಪರವಾಗಿ ಚುನಾವಣಾ ಏಜೆಂಟ್ ಅಗಿದ್ದ ಹಿರಿಯ ನಾಯಕ ಹೆಚ್.ಡಿ.ರೇವಣ್ಣ ಅವರಿಗೆ ತಾವು ಯಾರಿಗೆ ಮತ ಕೊಟ್ಟಿದ್ದೇವೆ ಎಂಬುದನ್ನು ತೋರಿಸಿಯೇ ಈ ಎಂಟು ಮಂದಿ ಮತ ಚಲಾಯಿಸಿದರಲ್ಲದೇ,ಪಕ್ಷ ವಿರೋಧಿ ಚಟುವಟಿಕೆಗಾಗಿ ರೇವಣ್ಣ ಅವರು ತಮಗೆ ಕೊಟ್ಟ ಷೋಕಾಸ್ ನೋಟೀಸನ್ನೂ ಸ್ವೀಕರಿಸಿದರು.

ಅಂದ ಹಾಗೆ ಇದಕ್ಕೂ ಮುನ್ನ ರಾಜ್ಯಸಬಾ ಚುನಾವಣೆ ಕಾಂಗ್ರೆಸ್ ವರ್ಸಸ್ ಜೆಡಿಎಸ್ ಎಂದೇ ಪರಿಗಣಿತವಾಗಿದ್ದರೂ ಶುಕ್ರವಾರ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ನಾಲ್ಕು ಮಂದಿ, ಬಿಜೆಪಿಯಿಂದ ಕಣಕ್ಕಿಳಿದ ಎರಡು ಮಂದಿ ಗೆಲುವು ಸಾಧಿಸಿದ್ದರೆ ಕಣಕ್ಕಿಳಿದ ಈರ್ವ ಜೆಡಿಎಸ್ ಅ್ಯರ್ಥಿಗಳ ಪೈಕಿ ನಾರಾಯಣಸ್ವಾಮಿ ಮಾತ್ರ ಗೆಲುವು ಸಾಧಿಸಿ ಡಾ. ವೆಂಕಟಪತಿ ಸೋಲುಂಡಿದ್ದರು.

ಹೀಗೆ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ನ ಮಂತ್ರದಂಡ ಕೆಲಸ ಮಾಡದೆ ಇದ್ದ ಪರಿಣಾಮವಾಗಿ ರಾಜ್ಯಸಬಾ ಚುನಾವಣೆಯ ಫಲಿತಾಂಶವೂ ನಿಕ್ಕಿಯಾಗಿತ್ತು.

ಶನಿವಾರ ಬೆಳಗ್ಗೆ ಒಂಬತ್ತು ಗಂಟೆಗೆ ಆರಂಭಗೊಂಡ ರಾಜ್ಯಸಬಾ ಚುನಾವಣೆಯ ಮತದಾನ ಪ್ರಕ್ರಿಯೆಯೂ ಅವಧಿಗೂ ಮುನ್ನ ಪೂರ್ಣಗೊಂಡಿದ್ದಲ್ಲದೆ ನಿರೀಕ್ಷೆಯಂತೆ ಪಕ್ಷೇತರರ ಪೈಕಿ ಇಬ್ಬರು ಬಿಜೆಪಿಗೆ ಮತ ಹಾಕಿ ಕೇಂದ್ರ ವಾಣಿಜ್ಯ ಖಾತೆ ಸಹಾಯಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಡ ಸೇರುವಂತೆ ಮಾಡಿದರು.

ಉಳಿದಂತೆ ಪಕ್ಷೇತರರು ಹಾಗೂ ಜೆಡಿಎಸ್‌ನ ಐವರು ಭಿನ್ನಮತೀಯ ಶಾಸಕರು ಕಾಂಗ್ರೆಸ್ ಬೆಂಬಲಕ್ಕೆ ನಿಂತ ಪರಿಣಾಮವಾಗಿ ಅಧಿಕೃತ ಅಭ್ಯರ್ಥಿಗಳಾದ ಆಸ್ಕರ್ ಫೆರ್ನಾಂಡೀಸ್, ಜೈರಾಂ ರಮೇಶ್ ಹಾಗೂ ಮೂರನೇ ಅ್ಯರ್ಥಿ ಕೆ.ಸಿ.ರಾಮಮೂರ್ತಿ ಗೆಲುವು ಸಾಧಿಸಿದರು.

ಇದಕ್ಕೂ ಮುನ್ನ ರಾಜ್ಯಸಭಾ ಚುನಾವಣೆಯಲ್ಲಿ ಮತಕ್ಕಾಗಿ ಲಂಚ ಆಮಿಷದ ಆರೋಪ ಹೊತ್ತ ಜೆಡಿಎಸ್‌ನ ಜಿ.ಟಿ.ದೇವೇಗೌಡ ಹಾಗೂ ಮಲ್ಲಿಕಾರ್ಜುನ ಖೂಬಾ ಯಾವುದೇ ಗೊಂದಲಕ್ಕೆ ಆಸ್ಪದ ಮಾಡಿಕೊಡದೆ ಪಕ್ಷದ ಅ್ಯರ್ಥಿಗೆ ಮತ ಚಲಾಯಿಸಿದರಾದರೂ ಫಾರೂಕ್ ಅವರಿಗೆ ದಡ ಸೇರಲು ಅಗತ್ಯವಾದ ನಲವತ್ತೈದು ಮತಗಳು ದಕ್ಕಲಿಲ್ಲ.

ಯಾಕೆಂದರೆ ವಿಧಾನಪರಿಷತ್ ಚುನಾವಣೆಯಲ್ಲಿ ಬಹಿರಂಗವಾಗಿಯೇ ಕಾಂಗ್ರೆಸ್ ಬೆಂಬಲಕ್ಕೆ ನಿಂತ ರೀತಿಯಲ್ಲೇ ಐದು ಮಂದಿ ಜೆಡಿಎಸ್ ಶಾಸಕರು ರಾಜ್ಯಸಬಾ ಚುನಾವಣೆಯಲ್ಲಿ ಕೈ ಪಕ್ಷದ ಮೂರನೇ ಅ್ಯರ್ಥಿ ಕೆ.ಸಿ.ರಾಮಮೂರ್ತಿ ಪರವಾಗಿ ಮತ ಚಲಾಯಿಸಿದರು.
ಹೀಗೆ ಐದು ಮಂದಿ ಶಾಸಕರು ಪಕ್ಷದ ವಿರುದ್ಧ ಮತ ಚಲಾಯಿಸಿರುವುದು ಮತಗಟ್ಟೆಯಲ್ಲಿ ಚುನಾವಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದವರಿಗೆ ಗೊತ್ತಾದರೂ,ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಅವರನ್ನು ವಜಾ ಮಾಡಲು ಅವಕಾಶ ಇಲ್ಲದೆ ಇರುವುದರಿಂದ ಕೇವಲ ವರಿಷ್ಠರಿಗೆ ದೂರು ನೀಡಿ ಮೌನವಾಗಬೇಕಾಯಿತು.

ಹೀಗಾಗಿ ಪಕ್ಷಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ ಶಾಸಕರನ್ನು ಜೆಡಿಎಸ್ ಒಂದೋ, ಪಕ್ಷದಿಂದ ಉಚ್ಚಾಟಿಸಬಹುದು.ಇಲ್ಲವೇ ಶಾಸಕಾಂಗ ಪಕ್ಷದಿಂದ ಅಮಾನತು ಮಾಡಬಹುದು. ಆದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ.
ಪಕ್ಷಾಂತರ ನಿಷೇಧ ಕಾಯ್ದೆಯ ಪವರ್ ಬಳಸಿ ವಿಧಾನಸಬಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಕ್ರಮ ಕೈಗೊಳ್ಳಬಹುದಾದರೂ ಸದನದ ವ್ಯಾಪ್ತಿಯಲ್ಲಿ ನಡೆಯುವ ಚಟುವಟಿಕೆಗಳಿಗೆ ಮಾತ್ರ ಅವರ ಅಧಿಕಾರ ಸೀಮಿತವೇ ಹೊರತು ವಿಧಾನಸಬೆಯ ಹೊರಗೆ ನಡೆಯುವ ಇಂತಹ ಘಟನೆಗಳ ಆಧಾರದ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಇಂತಹ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸುವಂತಿಲ್ಲ.

ಅಂದ ಹಾಗೆ ಈ ಬಾರಿಯ ರಾಜ್ಯಸಭಾ ಚುನಾವಣೆ ಹಲವು ಕಾರಣಗಳಿಗಾಗಿ ದೇಶದ ಗಮನ ಸೆಳೆದಿತ್ತು. ಯಾಕೆಂದರೆ ನಿರ್ದಿಷ್ಟ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಲು ಜೆಡಿಎಸ್‌ನ ಇಬ್ಬರು, ಕೆಜೆಪಿಯ ಒಬ್ಬರು ಹಾಗೂ ಪಕ್ಷೇತರರೊಬ್ಬರು ಐದರಿಂದ ಹತ್ತು ಕೋಟಿ ರೂ. ಲಂಚ ಕೇಳಿದರು ಎಂದು ಇಂಡಿಯಾ ಟುಡೆ ನಡೆಸಿದ ಸ್ಟಿಂಗ್ ಆಪರೇಷನ್ ಮೂಲಕ ದೂರಲಾಗಿತ್ತು.

ಈ ಮಧ್ಯೆ ರಾಜ್ಯಸಬಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹರ್ಷ ವ್ಯಕ್ತಪಡಿಸಿರುವ ಸಿಎಂ ಸಿದ್ಧರಾಮಯ್ಯ ಮತ್ತಿತರರು, ನಾಮ ಗೆಲ್ಲುತ್ತೇವೆ ಎಂಬುದು ಗೊತ್ತಿತ್ತು. ಆದರೆ ಏನೋ ಅಗಿ ಬಿಡುತ್ತದೆ ಎಂಬ ಗುಲ್ಲು ಹಬ್ಬಿಸಲಾಗಿತ್ತು.ಆದರೆ ಏನೂ ಆಗಲಿಲ್ಲ ಎಂದು ಹರ್ಷ ವ್ಯಕ್ತ ಪಡಿಸಿದರು.
ನಮ್ಮ ಪಕ್ಷ ನೀಡಿರುವ ಕಾರ್ಯಕ್ರಮಗಳ ಬಗ್ಗೆ ಶಾಸಕರಿಗೆ ತೃಪ್ತಿಯಿದೆ. ಹೀಗಾಗಿ ಯಾರೇ ನಮ್ಮ ಪಕ್ಷಕ್ಕೆ ಮತ ನೀಡಿದ್ದರೂ ಅವರು ನಮ್ಮ ಕಾರ್ಯಕ್ರಮಗಳನ್ನು ಬೆಂಬಲಿಸಿದ್ದಾರೆ ಎಂದು ಅವರು ಅಭಿಪ್ರಾಯಿಸಿದರು.

ಠುಸ್ಸಾದ ಜೆಡಿಎಸ್ ದೂರು

ತಮ್ಮ ಪಕ್ಷದ ಅಭ್ಯರ್ಥಿಗಳು ಅಡ್ಡಿ ಮತದಾನಮಾಡಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್‌ನ ಎಚ್.ಡಿ. ರೇವಣ್ಣ ನೀಡಿದ ಎರಡು ದೂರುಗಳನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ. ತಮ್ಮ ದೂರುಗಳ ಬಗ್ಗೆ ಚುನಾವಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಿಯ ತನಕ ಮತ ಎಣಿಕೆ ನಡೆಸಬಾರದು ಎಂದು ತಕರಾರು ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಎಸ್. ಮೂರ್ತಿ ಎರಡು ದೂರುಗಳನ್ನು ಆಯೋಗಕ್ಕೆ ರವಾನಿಸಿದ್ದರು. ಆಯೋಗ ಎರಡೂ ದೂರುಗಳನ್ನು ತಿರಸ್ಕರಿಸಿತು. ಈ ಹಿನ್ನೆಲೆಯಲ್ಲಿ ಐದು ಗಂಟೆಗೆ ಆರಂಭವಾಗಬೇಕಾಗಿದ್ದ ಮತ ಎಣಿಕೆ ಒಂದು ಗಂಟೆ ತಡವಾಗಿ ಆರಂಭವಾಯಿತು.

Leave a Reply

Please enter your comment!
Please enter your name here