ಎಪಿಎಂಸಿ ಆನ್‍ಲೈನ್ ಮಾರಾಟ ವ್ಯವಸ್ಥೆ: ಪ್ರಚಾರಕ್ಕೆ ಚಾಲನೆ

ಪತ್ರಿಕಾ ಪ್ರಕಟಣೆ

ಮಂಗಳೂರು:  ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಜಾರಿಗೆ ತಂದಿರುವ  ಅನ್‍ಲೈನ್ ಮೂಲಕ ಮಾರಾಟ ಹಾಗೂ ರೈತರ ನೊಂದಣಿ ಮಾಡುವ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಸೋಮವಾರ ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ಚಾಲನೆ ನೀಡಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಗಳೂರು ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಬೆಂಗಳೂರು, ಎಪಿಎಂಸಿಗಳ  ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಮಂಗಳೂರು ಎಪಿಎಂಸಿ ಅಧ್ಯಕ್ಷ ಎಕ್ಕಾರು ಮೋನಪ್ಪ ಶೆಟ್ಟಿ ಉದ್ಘಾಟಿಸಿದರು.

image001apmc-online-marketing-20160321-001

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಅನ್‍ಲೈನ್ ಮೂಲಕ ಮಾಡಲು ಮತ್ತು ಮಾರಾಟದ ಎಲ್ಲ ಚಟುವಟಿಕೆಗಳಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಸರಳೀಕರಣಗೊಳಿಸಲು ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರಿಂದ ಕೃಷಿಕರ ಬೆಳೆಗಳಿಗೆ ನ್ಯಾಯೋಚಿತ ಬೆಲೆ ದೊರಕಲಿದೆ. ಉತ್ತಮ ಗುಣಮಟ್ಟ, ಸಕಾಲಕ್ಕೆ ಹಣಪಾವತಿ ವ್ಯವಸ್ಥೆ ಇದರಲ್ಲಿದೆ ಎಂದು ಹೇಳಿದರು.

ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ರೆಡ್ಡಿ ಮಾತನಾಡಿ, ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟ ಮಾಡಿದರೆ ಪಾರದರ್ಶಕ ವ್ಯವಸ್ಥೆ ಇರುತ್ತದೆ.  ಸರಕುಗಳನ್ನು ಅವುಗಳ ಗುಣಮಟ್ಟದ ಅಧಾರದ ಮೇಲೆ ವರ್ಗೀಕರಿಸಲಾಗುತ್ತದೆ. ಟೆಂಡರ್ ಪದ್ದತಿ, ಬಹಿರಂಗ ಹರಾಜು ಪದ್ದತಿ ಅಥವಾ ಪರಸ್ಪರ ಬಹಿರಂಗ ಒಪ್ಪಂದದ ಪದ್ದತಿಯು ಮಾರಾಟದ ಮೂಲಕ ಸ್ಪರ್ಧಾತ್ಮಕ ಬೆಲೆಯನ್ನು ಪಡೆಯಬಹುದು. ಮಾರಾಟವಾದ ದಿನವೇ ಸರಕಿನ ಮೌಲ್ಯವನ್ನು ಪಡೆಯಬಹುದು ಎಂದರು. ಆನ್‍ಲೈನ್ ಮಾರುಕಟ್ಟೆ ನೋಂದಾಯಿಸಲು ರೈತರು ಕಡ್ಡಾಯವಾಗಿ ತಮ್ಮ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರ ನೀಡಬೇಕು. ಇದರಿಂದ ತಮ್ಮ ಉತ್ಪನ್ನಗಳ ಮಾರಾಟದ ವಿವರ ಸಂದೇಶ ಬರಲಿದ್ದು, ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ರೈತರು ಎಪಿಎಂಸಿ ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆಗೆ ನೋಂದಾಯಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆಯ    ಪ್ರಚಾರಾಂದೋಲನಕ್ಕಾಗಿ ವಿಶೇಷವಾಗಿ ಸಿದ್ದಪಡಿಸಿದ ವಾರ್ತಾ ಇಲಾಖೆಯ ವಾಹನವು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಸಾಕ್ಷ್ಯಚಿತ್ರ, ಕರಪತ್ರಗಳ ಹಂಚಿಕೆಯ ಮೂಲಕ ಜಾಗೃತಿ ಮೂಡಿಸಲಿದೆ ಎಂದರು.

ಸಮಾರಂಭದಲ್ಲಿ ಬೈಕಂಪಾಡಿ ಕಾರ್ಪೋರೇಟರ್ ಪುರುಷೋತ್ತಮ ಚಿತ್ರಾಪುರ, ಎಪಿಎಂಸಿ ಸದಸ್ಯ ಜಯಶೀಲ ಅಡ್ಯಂತಾಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here