ಕಪ್ಪೆ ಚಿಪ್ಪು ಹೆಕ್ಕಲು ಹೋದ ವ್ಯಕ್ತಿ ನೀರು ಪಾಲು : ಇಬ್ಬರ ರಕ್ಷಣೆ

ಕಪ್ಪೆ ಚಿಪ್ಪು ಹೆಕ್ಕಲು ಹೋದ ವ್ಯಕ್ತಿ ನೀರು ಪಾಲು : ಇಬ್ಬರ ರಕ್ಷಣೆ

ಮಂಗಳೂರು: ಸೋಮೇಶ್ವರ ಉಚ್ಚಿಲದ ಬೆಟ್ಟಂಪಾಡಿ ಸಮುದ್ರ ಕಿನಾರೆಯ ಉಪ್ಪುನೀರಿನ ಹೊಳೆಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋದ ವ್ಯಕ್ತಿಯೋರ್ವ ನೀರು ಪಾಲಾದ ಘಟನೆ ರವಿವಾರ ಮಧ್ಯಾಹ್ನ ನಡೆದಿದ್ದು, ಇವರ ಜೊತೆ ಪ್ರಾಣಾಪಾಯದಲ್ಲಿ ಸಿಲುಕಿದ್ದ ಇನ್ನಿಬ್ಬರನ್ನು ಯುವಕನೋರ್ವ ರಕ್ಷಿಸಿದ್ದಾರೆ.

ಮೃತ ವ್ಯಕ್ತಿಯನ್ನು ಕುಂಪಲ ಬಾಲಕೃಷ್ಣ ಮಂದಿರದ ಬಳಿಯ ಅಚ್ಯುತ (43) ಎಂದು ಗುರುತಿಸಲಾಗಿದೆ.

ರಜಾದಿನವಾದ ರವಿವಾರದಂದು ಅಚ್ಯುತ ತನ್ನ ಸ್ನೇಹಿತರಾದ ಮಾಡೂರಿನ ಸತೀಶ್‌ ಮತ್ತು ತಲಪಾಡಿಯ ನಾರಾಯಣ ಎಂಬವರೊಂದಿಗೆ ಬೆಟ್ಟಂಪಾಡಿ ಕಡಲಕಿನಾರೆಗೆ ತೆರಳಿ ಉಪ್ಪು ನೀರಿನ ಹೊಳೆಗಿಳಿದು ಕಪ್ಪೆಚಿಪ್ಪನ್ನು ಹೆಕ್ಕುತ್ತಿದ್ದರೆನ್ನಲಾಗಿದೆ. ಈ ಪ್ರದೇಶದಲ್ಲಿ ಮರಳುಗಾರಿಕೆ ನಡೆಯುತ್ತಿರುವುದರಿಂದ ನಡುವಿನಲ್ಲಿ ಬೃಹತ್‌ ಹೊಂಡಗಳು ನಿರ್ಮಾಣಗೊಂಡಿದ್ದು ಇದರ ಅರಿವಿಲ್ಲದ ಅಚ್ಯುತ ಮುಂದಕ್ಕೆ ಹೋಗಿದ್ದು ಹೊಳೆಯ ಸುಳಿಗೆ ಸಿಲುಕಿ ನೀರುಪಾಲಾದರು ಎಂದು ತಿಳಿದು ಬಂದಿದೆ.

ಇವರ ಜೊತೆಗಾರರಾದ ಸತೀಶ್‌ ಮತ್ತು ನಾರಾಯಣ್‌ ಅವರು ಈಜು ಗೊತ್ತಿಲ್ಲದಿದ್ದರೂ ಅಚ್ಯುತ ಅವರನ್ನು ರಕ್ಷಿಸಲು ಮುಂದಾಗಿ ಇಬ್ಬರೂ ಅಪಾಯಕ್ಕೆ ಸಿಲುಕಿದ್ದರು.

ಅಚ್ಯುತ ಮತ್ತು ಅವರ ಸ್ನೇಹಿತರು ನೀರು ಪಾಲಾಗುತ್ತಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿ ಹರೀಶ್ ಎಂಬವರು ತನ್ನ ಸ್ನೇಹಿತರ ಸಹಾಯದಿಂದ ದೋಣಿಯಲ್ಲಿ ಸತೀಶ್ ಹಾಗೂ ನಾರಾಯಣ್ ಅವರನ್ನು ರಕ್ಷಿಸಿ ದಡಕ್ಕೆ ತಲುಪಿಸಿದ್ದಾರೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply