ಕಾರ್ಕಳ : ಪರ್ಪಲೆ ಗುಡ್ಡೆ ಟಿಪ್ಪು ಸುಲ್ತಾನ್‌ ಗುಹೆಯ ಚಾದರ್‌ಗೆ ಬೆಂಕಿ: ನಾಲ್ವರ ಬಂಧನ

ಕಾರ್ಕಳ: ಪರ್ಪಲೆ ಗುಡ್ಡೆ ಸಮೀಪದ ಟಿಪ್ಪು ಸುಲ್ತಾನ್‌ ಗುಹೆಯ ಬಳಿ ಪ್ರಾರ್ಥನೆ ಸಲ್ಲಿಸಿ ಹಾಸಲಾದ ಚಾದರವನ್ನು (ಬಟ್ಟೆಯ ಹೊದಿಕೆ) ದುಷ್ಕರ್ಮಿಗಳು ನಾಶ ಮಾಡಿದ್ದಾರೆ ಎಂಬ ಆರೋಪದಡಿ ನಾಲ್ವರನ್ನು ನಗರ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಸಂಘರ್ಷ ಉಂಟು ಮಾಡುವ ದುರುದ್ದೇಶದಿಂದ ಈ ಕೃತ್ಯ ನಡೆಸಲಾಗಿದೆ ಎಂಬ ಹಿನ್ನೆಲೆಯಲ್ಲಿ ನಾಲ್ವರನ್ನು ಬಂಧಿಸಿದ್ದು, ಇನ್ನುಳಿದ ಮೂವರು ಆರೋಪಿಗಳಿಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಅನಿಲ್‌ ಪ್ರಭು ಎಂಬವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ಪ್ರಕರಣದಡಿ ಅನಿಲ್‌ ಪ್ರಭು ಸೇರಿದಂತೆ ಅಕ್ಷಯ ಶೆಟ್ಟಿ ದೂಪದಕಟ್ಟೆ, ರಾಘವೇಂದ್ರ ಗುಂಡಾಜೆ, ಆತ್ಮಾನಂದ ಎಂಬವರನ್ನು ಬಂಧಿಸಿದ್ದು, ರಂಜನ್‌, ಗಣೇಶ್‌ ಮತ್ತು ದೀಪು ನಕ್ರೆ ತಲೆಮರೆಸಿಕೊಂಡಿದ್ದಾರೆ. ಪರ್ಪಲ್‌ಗ‌ುಡ್ಡೆಯಲ್ಲಿರುವ ಗವಿಯನ್ನು ಟಿಪ್ಪು ಸುಲ್ತಾನ್‌ ಗುಹೆ ಎಂದು ಮುಸ್ಲಿಮರು ಹೇಳುತ್ತಿದ್ದು ಮುಸ್ಲಿಮರು ಆ ಪ್ರದೇಶದಲ್ಲಿ ಶುಕ್ರವಾರ ಹಾಗೂ ರವಿವಾರದಂದು ಪ್ರಾರ್ಥನೆ ಸಲ್ಲಿಸುತ್ತಿದ್ದು, ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸಿ ಅಲ್ಲೇ ಇರಿಸಿ ಹೋಗಿದ್ದ ಚಾದರನ್ನು ಸುಟ್ಟುಹಾಕಿದ್ದಾರೆಂದು ತಿಳಿದು ಬಂದಿದೆ. ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಅಣ್ಣಾಮಲೈ ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಕಳ ಎಎಸ್ಪಿ ಡಾ.ಸುಮನಾ ಈ ಸಂದರ್ಭ ಹಾಜರಿದ್ದರು.

Leave a Reply

Please enter your comment!
Please enter your name here