ಕುಂದಾಪುರ:ಕಾಲೇಜು ವಿದ್ಯಾರ್ಥಿನಿಯ ನಿಗೂಢ ಸಾವು : ಕೊಲೆ ಶಂಕೆ

ಕುಂದಾಪುರ: ಕಾಲೇಜಿನಿಂದ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮನೆ ಸಮೀಪದ ಅಕೇಶಿಯಾ ಪ್ಲಾಂಟೇಶನ್ನಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ವ್ಯಾಪಕವಾಗಿ ಕೊಲೆ ಶಂಕೆ ವ್ಯಕ್ತವಾಗಿದೆ. ಬೈಂದೂರಿನ ಜ್ಯೂನಿಯರ್ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಹೇನಬೇರು ನಿವಾಸಿ ಬಾಬು ದೇವಾಡಿಗ ಎಂಬುವರ ಪುತ್ರಿ ಅಕ್ಷತಾ ದೇವಾಡಿಗ(17) ಎಂಬಾಕೆಯೇ ನಿಗೂಢವಾಗಿ ಸಾವನ್ನಪ್ಪಿದವಳು

IMG-20150617-WA0071

ಎಸ್‍ಎಸ್‍ಎಲ್‍ಸಿಯಲ್ಲಿ ಶೇ.93 ಅಂಕಗಳಿಸಿದ್ದ ಅಕ್ಷತಾ ದೇವಾಡಿಗಳಿಗೆ ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿದವಳು ಎಂಬ ಕಾರಣಕ್ಕೆ ಸರ್ಕಾರ ಕೊಡಮಾಡಲ್ಪಟ್ಟ ಪ್ರಶಸ್ತಿಗೆ ಬಾಜನಳಾಗಿದ್ದು, ಮೈಸೂರಿನಲ್ಲಿ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಬೈಂದೂರಿನ ಸರ್ಕಾರೀ ಜ್ಯೂನಿಯರ್ ಕಾಲೇಜಿನ ಪ್ರಥಮ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಅಕ್ಷತಾ ಪ್ರತಿನಿತ್ಯ ಮನೆಯಿಂದ ನಡೆದೇ ಬರುತ್ತಿದ್ದಳು. ಸಂಜೆ ಕಾಲೇಜು ಬಿಟ್ಟವಳು ಮನೆಗೆ ಬರಬೇಕಾದರೆ ದಾರಿ ಮಧ್ಯೆ ಇದ್ದ ಅರಣ್ಯ ಇಲಾಖೆ ಅಕೇಶಿಯಾ ತೋಪಿನ ಮೂಲಕವೇ ಬರಬೇಕು. ಬುಧವಾರ ಸಂಜೆ ಎಷ್ಟು ಹೊತ್ತಾದರೂ ಮನೆಗೆ ಬಾರದ ಅಕ್ಷತಾ ಪೋಷಕರು ಗಾಬರಿಗೊಂಡು ಕಾಲೆಜಿಗೆ ಪೋನ್ ಮಾಡಿ ವಿಚಾರಿಸಿದಾಗ ಅದಾಗಲೇ ಹೊರಟಿರುವುದಾಗಿ ತಿಳಿಸಿದ್ದರು. ನಂತರ ಗಾಬರಿಗೊಂಡ ಸ್ಥಳೀಯರು ಹುಡುಕಾಟ ನಡೆಸಿದಾಗ ಮನೆಗೆ ಇನ್ನೂರು ಮೀಟರ್ ದೂರದ ಅಕೆಶಿಯಾ ತೋಪಿನ ದಾರಿಯಲ್ಲಿ ಮನೆಯಿಂದ ಹೋಗುವಾಗ ಎಡ ಬದಿಗೆ ದಾರಿಯಿಂದ ಸುಮಾರು 50 ಮೀಟರ್ ದೂರದ ಪೊದೆಯೊಂದರಲ್ಲಿ ಆಕೆಯ ಶವ ಪತ್ತೆಯಾಗಿದೆ. ಅಕ್ಷತಾಳು ಮೇಲ್ಮುಖವಾಗಿ ಮಲಗಿದ್ದ ಸ್ಥಿತಿಯಲ್ಲಿದ್ದು, ಕುತ್ತಿಗೆಗೆ ಆಕೆಯ ಶಾಲು ಸುತ್ತಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಸಂಜೆ ಸುಮಾರು 6.30ಕ್ಕೆ ಮೃತದೇಹ ಪತ್ತೆಯಾಗಿದ್ದು ಬೈಂದೂರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂಬುದಾಗಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ಅಣ್ಣಾಮಲೈ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭ ಕುಂದಾಪುರ ಡಿವೈಎಸ್ಪಿ ಎಂ.ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕರಾದ ಸುದರ್ಶನ ಹಾಗೂ ಪಿಎಂ.ದಿವಾಕರ, ಉಪನಿರೀಕ್ಷಕ ಸಂತೋಷ್ ಕಾಯ್ಕಿಣಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅಕ್ಷತಾಳ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಮಣಿಪಾಲಕ್ಕೆ ಕೊಂಡೊಯ್ಯುವ ಬಗ್ಗೆ ಚಿಂತಿಸಲಾಗುತ್ತಿದ್ದು, ಫೊರೆನ್ಸಿಕ್ ತಜ್ಞರ ಆಗಮನಕ್ಕೆ ಕಾಯಲಾಗುತ್ತಿದೆ.

ಶಿರೂರಿನಲ್ಲಿ ನಡೆದ ರತ್ನಾ ಕೊಠಾರಿಯ ಸಾವಿನ ರೀತಿಯಲ್ಲಿಯೇ ಈ ಕೊಲೆಯೂ ನಡೆದಿರಬಹುದೇ ಎನ್ನುವ ಶಂಕೆಯೂ ಈಗ ಎಲ್ಲೆಡೆ ವ್ಯಕ್ತವಾಗುತ್ತಿದ್ದು, ಆಕೆಯ ಮೃತ ದೇಹವೂ ಹೀಗೇ ಕಾಲು ದಾರಿಯ ಸಮೀಪದ ಪೊದೆಯೊಮದರಲ್ಲಿ ಪತ್ತೆಯಾಗಿತ್ತು. ಆದರೆ ಆಕೆಯ ಮೃತ ದೇಹ ದೊರೆಯುವಾಗ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸಾವಿನ ಹಿಂದಿನ ಕಾರಣ ದೊರೆತಿಲ್ಲ ಎಂದು ಪೊಲೀಸರು ತಿಳಿಸಿ ಕೈತೊಳೆದುಕೊಂಡಿದ್ದರು. ಇದೀಗ ಅದೇ ರೀತಿಯಲ್ಲಿ ಮತ್ತೊಬ್ಬ ವಿದ್ಯಾರ್ಥಿನಿಯ ಸಾವು ನಡೆದಿದ್ದು ಸಾವಿನ ಹಿಂದಿನ ಸತ್ಯವನ್ನು ಬೆಧಿಸಿ ಸಾವಿಗೀಡಾದ ಅಕ್ಷತಾಳಿಗೆ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

Leave a Reply

Please enter your comment!
Please enter your name here