ಜೂನ್ 21 : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಿ

ಜೂನ್ 21 : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಿ

ಉಡುಪಿ : ಭಾರತೀಯ ಸಂಸ್ಕೃತಿಯ ಬಹುಮುಖ್ಯ ಅಂಗವಾದ ಯೋಗವು ಮಾನವನ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ತನ್ನದೇ ಆದ ಮಹತ್ತರ ಕೊಡುಗೆಯನ್ನು ನೀಡಿದೆ. ಅದುದರಿಂದಲೇ ವಿಶ್ವಾದ್ಯಂತ ಜನಮನ್ನಣೆಯನ್ನು ಪಡೆದಿದ್ದು, ಇಂದಿನ ಯುವ ಜನಾಂಗಕ್ಕೆ ಯೋಗದ ಬಗ್ಗೆ ಅರಿವನ್ನು ಉಂಟು ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿರುತ್ತದೆ.

ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಉಡುಪಿ , ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎಸ್‍ಡಿಎಂ ಎಜುಕೇಶನಲ್ ಸೊಸೈಟಿ ಉಜಿರೆ ಇವರ ಸಹಯೋಗದಲ್ಲಿ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗದಿನ ಆಚರಿಸಲಾಗುತ್ತಿದೆ.

ಯೋಗವನ್ನು ದಿನನಿತ್ಯದ ಚಟುವಟಿಕೆಯನ್ನಾಗಿಸಿಕೊಂಡಲ್ಲಿ ಜನರ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಸಹಾ ಉತ್ತಮಗೊಳಿಸಿಕೊಳ್ಳಬಹುದಾಗಿದ್ದು, ಈ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಎಸ್‍ಡಿಎಂ ಎಜುಕೇಶನಲ್ ಸೊಸೈಟಿ ಉಜಿರೆ ಇವರು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಒಂದು ತಿಂಗಳ ಅವಧಿಯ ಉಚಿತ ಯೋಗ ಶಿಬಿರವನ್ನು ಜಿಲ್ಲೆಯ 12 ಸ್ಥಳಗಳಲ್ಲಿ ನಡೆಸುತ್ತಿದ್ದಾರೆ.

ಉಡುಪಿಯಲ್ಲಿ ಉದ್ಯಾವರ ಎಸ್‍ಡಿಎಂ ಆಯುರ್ವೇದ ಕಾಲೇಜು, ಕಲ್ಯಾಣಪುರದ ತ್ರಿಶಾ ಕಾಲೇಜು, ಪದ್ಮಾವತಿ ಕಲ್ಯಾಣ ಮಂಟಪ-ಮಾರುತಿ ಲೇನ್, ಶ್ರೀ ಕೃಷ್ಣ ಮಠದ ರಾಜಾಂಗಣ, ಪರ್ಕಳ ಕೆರೆಬದಿ ನಾಗಸ್ಥಾನ, ಕಾರ್ಕಳ ಭುವನೇಂದ್ರ ಕಾಲೇಜು, ಪೆರ್ವಾಜೆ ಸುಂದರ ಪುರಾಣಿಕ ಪ್ರೌಢಶಾಲೆ, ಹೆಬ್ರಿ ಸಮಾಜ ಮಂದಿರ, ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜು, ಕಾರಂತ ಭವನ ಸಾಲಿಗ್ರಾಮ, ಕೋಟ ಕಾರಂತ ಥೀಮ್ ಪಾರ್ಕ್ ಈ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತರಬೇತಿಯನ್ನು ನಡೆಸಲಾಗುತ್ತಿದ್ದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಇವರೆಲ್ಲ ಪಾಲ್ಗೊಳ್ಳುತ್ತಿದ್ದಾರೆ.

ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾ ಒಳಂಗಣ ಕ್ರೀಡಾಂಗಣ ಅಜ್ಜರಕಾಡು ಉಡುಪಿ ಇಲ್ಲಿ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಮೊದಲಿನ 45 ನಿಮಿಷಗಳ ಅವಧಿಗೆ ಆಯುಷ್ ಮಂತ್ರಾಲಯದಿಂದ ನೀಡಲ್ಪಟ್ಟ ಯೋಗಾಸನಗಳ ಪ್ರಾತ್ಯಕ್ಷಿಕೆ ಪ್ರದರ್ಶನ, ಯೋಗ ನಡಿಗೆ ಮುಂತಾದ ಯೋಗದ ಬಗ್ಗೆ ಜಾಗೃತಿಯನ್ನು ಉಂಟು ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಲಕಾನಂದ ರಾವ್ ತಿಳಿಸಿದ್ದಾರೆ.

Leave a Reply

Please enter your comment!
Please enter your name here