ಬೆಂಗಳೂರು: ಮಗನ ವೇಗಕ್ಕೆ ಬಲಿಯಾಯ್ತು ತಾಯಿ ಜೀವ; ವೈಟ್ ಫೀಲ್ಡ್ ವಿನಾಯಕ ನಗರದಲ್ಲಿ ಭೀಕರ ಅಪಘಾತ

ಬೆಂಗಳೂರು: ವೇಗವಾಗಿ ಬೈಕ್ ಓಡಿಸುತ್ತಿದ್ದ ಮಗ ರಸ್ತೆ ಉಬ್ಬನ್ನು ಗಮನಿಸದೇ ಆಯತಪ್ಪಿ ಬಿದ್ದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಆತನ ತಾಯಿ ಪ್ರಾಣ ಬಿಟ್ಟ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ.

ವೈಟ್‌ಫೀಲ್ಡ್‌ನ ವಿನಾಯಕನಗರದ ಬಸ್‌ನಿಲ್ದಾಣದ ಬಳಿ ವೇಗವಾಗಿ ಚಲಿಸುತ್ತಿದ್ದ ಬೈಕ್ ಸವಾರ ರಸ್ತೆ ಉಬ್ಬನ್ನು ಗಮನಿಸದೇ ಬೈಕ್ ಚಲಾಯಿಸಿದ್ದರಿಂದ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಆತನ ತಾಯಿ ಆಯತಪ್ಪಿ ಕೆಳಕ್ಕೆ ಬಿದಿದ್ದಾರೆ. ಬಿದ್ದ ರಭಸಕ್ಕೆ ಆಕೆಯ ತಲೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾರೆ.

ಗುಂಜೂರಿನ ಉಮಾದೇವಿ (50 ವರ್ಷ) ಎಂಬುವವರೇ ಮೃತ ದುರ್ದೈವಿಗಳಾಗಿದ್ದು, ತಮ್ಮ ಪುತ್ರ ರವೀಂದ್ರನೊಂದಿಗೆ ಹೀರೋ ಹೊಂಡಾ ಬೈಕಿನಲ್ಲಿ ಕುಳಿತು ಆಕೆ ಗುಂಜೂರಿನಲ್ಲಿರುವ ಮನೆಗೆ ತೆರಳುತ್ತಿದ್ದರು. ವರ್ತೂರು-ಗುಂಜೂರು ರಸ್ತೆಯ ವಿನಾಯಕನಗರದ ಬಸ್‌ನಿಲ್ದಾಣದ ಬಳಿ ಬರುತ್ತಿದ್ದ ವೇಳೆ ರಸ್ತೆಯಲ್ಲಿದ್ದ ಉಬ್ಬನ್ನು ಗಮನಿಸದ ರವೀಂದ್ರ ವೇಗವಾಗಿಯೇ ಬೈಕ್ ಚಲಾಯಿಸಿದ್ದಾನೆ. ಈ ವೇಳೆ ರವೀಂದ್ರ ಹಾಗೂ ಹಿಂಬದಿಯಲ್ಲಿದ್ದ ಉಮಾದೇವಿ ಇಬ್ಬರೂ ಆಯತಪ್ಪಿ ಕೆಳಗೆ ಬಿದಿದ್ದು, ಉಮಾದೇವಿ ಅವರ ತಲೆಗೆ ತೀವ್ರ ಪೆಟ್ಟಾಗಿದೆ. ರಕ್ತದ ಮಡುವಿನಲ್ಲಿ ಬಿದಿದ್ದ ಉಮಾದೇವಿ ಅವರನ್ನು ಕೂಡಲೇ ಸ್ಥಳೀಯರ ಸಹಾಯದಿಂದ ಸಮೀಪದ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಗದೇ ಅವರು ಮೃತಪಟ್ಟಿದ್ದಾರೆ.

ಗಾಯಗೊಂಡಿರುವ ಅವರ ಪುತ್ರ ರವೀಂದ್ರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೆಲ್ಮೆಟ್ ಹಾಕಿದ್ದರಿಂದ ರವೀಂದ್ರ ಗಾಯಗೊಂಡರೂ ಪ್ರಾಣಾಪಾಯದಿಂದ ಪಾರಾದರು. ಇತ್ತೀಚಿಗಷ್ಟೇ ಇಂಜಿನಿಯರಿಂಗ್ ಮುಗಿಸಿದ್ದ ರವೀಂದ್ರ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ವೈಟ್‍ಫೀಲ್ಡ್ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply