ಬೆಸೆಂಟ್‍ ಶಾಲೆಯಲ್ಲಿ ಮಕ್ಕಳ ರಕ್ಷಣೆಯ ಮಾಹಿತಿ ಕಾರ್ಯಾಗಾರ

ಬೆಸೆಂಟ್‍ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ರಕ್ಷಣೆಯ ಮಾಹಿತಿಕಾರ್ಯಾಗಾರ

ಮಂಗಳೂರು: ಇಂಚರ ಫೌಂಡೇಶನ್ ಹಾಗೂ ಬೆಸೆಂಟ್ ಮಹಿಳಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗ, ಸೋಮವಾರ (1ನೇ ಆಗಸ್ಟ್ 2016) ಮಕ್ಕಳ ರಕ್ಷಣೆ ಕುರಿತಾದ ಒಡಂಬಡಿಕೆಯೊಂದಕ್ಕೆ ಸಹಿ ಹಾಕಿದರು. ಇದರ ಅನ್ವಯ ಬೆಸೆಂಟ್‍ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಈ ವರ್ಷ ಪೂರ್ತಿ ವಿವಿಧ ಮಾಹಿತಿ ಹಾಗೂ ಬಾಹ್ಯ ವಿಸ್ತರಣಾ ಕಾರ್ಯಕ್ರಮಗಳ ಮೂಲಕ ಸ್ವರಕ್ಷಣೆಯ ಹಾಗೂ ದೌರ್ಜನ್ಯದ ವಿರುದ್ಧ ಜಾಗ್ಯತರಾಗಿಸಲು ನಿರ್ಧರಿಸಲಾಯಿತು.

besant-child-rights1-20160802

ಕಾರ್ಯಕ್ರಮದ ಅನ್ವಯ ಇಂದು ಆಯೋಜಿಸಲಾದ ಮಾಹಿತಿ ಕಾರ್ಯಾಗಾರದ ಉದ್ಘಾಟನೆಯನ್ನು ಕಾಲೇಜಿನ ಸಂಚಾಲಕರಾದ ಕೆ.ದೇವಾನಂದ ಪೈ ನೆರವೇರಿಸಿದರು. ಅವರು ತಮ್ಮ ಭಾಷಣದಲ್ಲಿ ಮಕ್ಕಳಿಗೆ ಹಿರಿಯರನ್ನು ಗೌರವಿಸಬೇಕು ಅವರ ಮಾತುಗಳನ್ನು ಪಾಲಿಸಬೇಕು ಇತ್ಯಾದಿ ಶಿಸ್ತಿನ ಪಾಠವನ್ನು ಶಾಲೆಗಳಲ್ಲಿ, ಮನೆಗಳಲ್ಲಿ ಹೇಳುತ್ತೇವೆ. ಆದರೆ ಇದೇ ಕೆಲವೊಮ್ಮೆ ಮಕ್ಕಳು ದೌರ್ಜನ್ಯ ಸಹಿಸಿಕೊಳ್ಳಲು ಕಾರಣವಾಗುತ್ತದೆ. ಯಾವ ಶಿಕ್ಷಣದಿಂದ ಮಕ್ಕಳ ಸಂಪೂರ್ಣ ಸುರಕ್ಷತೆ ಸಾಧ್ಯವಿಲ್ಲವೋ ಅಂತಹ ಶಿಕ್ಷಣ ಅಪೂರ್ಣ. ಮಕ್ಕಳ ರಕ್ಷಣೆಗಾಗಿ ಪೋಕ್ಸೋಕಾಯಿದೆ ಇದೆ. ಆದರೆ ಕಾನೂನಿಗೆ ಇತಿಮಿತಿ ಗಳಿರುತ್ತವೆ. ಮಕ್ಕಳನ್ನು ತಿಳಿದವರೇ ಅವರನ್ನು ದೌರ್ಜನ್ಯಕ್ಕೆ ಗುರಿಮಾಡಿದರೂ ಮಕ್ಕಳಿಗೆ ಅದು ತಿಳಿಯುವುದಿಲ್ಲ. ಆದ್ದರಿಂದ ಶಾಲೆ ವತಿಯಿಂದ ಇಂತಹ ಒಡಂಬಡಿಕೆಗಳು ಮೂಲಕ ಮಾಹಿತಿ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ಜಾಗೃತಿ ಉಂಟಾಗುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್‍ಕುಮಾರ್ ಶೆಟ್ಟಿ ಪಿ. ಮಾತನಾಡಿ, ಅಧ್ಯಾಪಕರಿಗೆ ಮಕ್ಕಳ ರಕ್ಷಣೆಯ ಕುರಿತಾದ ನಿರಂತರ ತರಬೇತಿ ನೀಡುವುದರಿಂದ ಅವರಲ್ಲಿ ವಿವೇಚನೆ ಮೂಡಿ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ದೌರ್ಜನ್ಯದಿಂದ ರಕ್ಷಿಸಲು ಸಾಧ್ಯವಾಗುತ್ತದೆ ಎಂದರು.

ಇಂಚರ ಫೌಂಡೇಶನ್ ನಿರ್ದೇಶಕರಾದ ಪ್ರೀತಂರೋಡ್ರಿಗಸ್, ಕಾರ್ಯಗಾರದಲ್ಲಿ ಕಿರುಚಿತ್ರಗಳ ಮುಖಾಂತರ ಮಕ್ಕಳಿಗೆ ಸ್ವರಕ್ಷಣೆಯ ಬಗ್ಗೆ ಹಾಗೂ ದೌರ್ಜನ್ಯವಾದಾಗ ಪ್ರತಿರೋಧ ಹಾಗೂ ಪ್ರತಿಕ್ರಿಯೆ ವ್ಯಕ್ತಪಡಿಸುವ ರೀತಿಗಳನ್ನು ತಿಳಿಸಲಾಗುವುದು ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಭಾವತಿ ಮಂಗಳೂರಿನಲ್ಲಿ ನಡೆದ ಮಕ್ಕಳ ಮೇಲಿನ ಕೆಲವು ಲೈಂಗಿಕ ದೌರ್ಜನ್ಯದ ನಿದರ್ಶನಕೊಟ್ಟರು.

besant-child-rights-20160802

ಬೆಸೆಂಟ್ ಮಹಿಳಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಒಡಂಬಡಿಕೆಯ ಅನ್ವಯ ಸಮಾಜಶಾಸ್ತ್ರದ ವಿಭಾಗದ ವಿದ್ಯಾರ್ಥಿಗಳು ಮುಂದೆ ಮಾಹಿತಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುತ್ತಾರೆ. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಶಿರ್ಲಿರಾಣಿ, ಇಂಚರಾ ಫೌಂಡೇಶನ್‍ ಕಾರ್ಯದರ್ಶಿ ರಮ್ಯಾ ಉಪಸ್ಥಿತರಿದ್ದರು.

Leave a Reply