ಬೈಂದೂರು: ಅರಣ್ಯ ಇಲಾಖೆ ಹೆಸರಿನಲ್ಲಿ ಸುಳ್ಳು ಜಾಹೀರಾತು ;ಕೆಲಸ ನೀಡುವುದಾಗಿ ನಂಬಿಸಿ ಹಲವರಿಗೆ ವಂಚನೆ

ಬೈಂದೂರು: ಕೇಂದ್ರ ಸರಕಾರದ ಹೆಸರಿನಲ್ಲಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಅರಣ್ಯ ಇಲಾಖೆಯಲ್ಲಿ ಕೆಲಸ ನೀಡುವುದಾಗಿ ಜಾಹೀರಾತು ಪ್ರಕಟಿಸಿ ಕೆಲವರಿಂದ ಲಕ್ಷಾಂತರ ರೂ. ಹಣ ವಸೂಲಿ ಮಾಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗೌತಮ್ ಕುಮಾರ್ ಹಾಗೂ ಪವನ್ ಕುಮಾರ್ ಎಂಬವರು ಜೂನ್ ತಿಂಗಳ ದಿನಪತ್ರಿಕೆಯೊಂದರಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಲು ಪುರುಷ/ಮಹಿಳೆಯರು ಬೇಕಾಗಿದ್ದಾರೆ ಎಂಬುದಾಗಿ ಜಾಹೀರಾತು ನೀಡಿದ್ದರು. ಅದನ್ನು ನೋಡಿದ ಕಿರಿಮಂಜೇಶ್ವರ ಅಗಸ್ತೇಶ್ವರ ಕಾಲನಿಯ ಈಶ್ವರ ಎಂಬವರ ಪತ್ನಿ ನಾಗರತ್ನ(29) ಜಾಹೀರಾತಿನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರು. ಅರ್ಜಿ ಫಾರಂ ಕಳುಹಿಸಲು ಗೌತಮ್ ಕುಮಾರ್ ಖಾತೆಗೆ 2 ಸಾವಿರ ರೂ. ಹಣವನ್ನು ಜಮೆ ಮಾಡುವಂತೆ ತಿಳಿಸಿದ್ದು, ಅದರಂತೆ ನಾಗರಾತ್ನ ಹಣ ಜಮೆ ಮಾಡಿದರು. ನಂತರ ಕೆಲವು ದಿನಗಳ ಬಳಿಕ ಅವರಿಗೆ ನೇಮಕಾತಿ ಪತ್ರ ಅಂಚೆ ಮೂಲಕ ಬಂದಿದ್ದು, 7 ದಿನಗಳ ತರಬೇತಿಯಲ್ಲಿ ಲ್ಯಾಪ್‌ಟಾಪ್, ಮೊಬೈಲ್ ಇತ್ಯಾದಿ ಸಾಮಗ್ರಿಗಳನ್ನು ನೀಡಲು 19,500 ರೂ. ಖಾತೆಗೆ ಜಮೆ ಮಾಡಬೇಕು, ತರಬೇತಿ ಮುಗಿದ ಬಳಿಕ ಹಣವನ್ನು ವಾಪಸ್ ನೀಡುವುದಾಗಿ ತಿಳಿಸಿದರು. ಅದರಂತೆ ನಾಗರಾತ್ನ ಆ ಖಾತೆಗೆ ಮತ್ತೆ ಹಣ ಜಮೆ ಮಾಡಿದರು.
ನಂತರ ವಿಮೆಗೆ 20,500 ರೂ. ಹಣವನ್ನು ಖಾತೆಗೆ ಜಮೆ ಮಾಡಲು ತಿಳಿಸಿದ್ದರಿಂದ ನಾಗರತ್ನ ಆ ಹಣವನ್ನೂ ಜಮೆ ಮಾಡಿದರು. ನಂತರ ನಾಗರತ್ನ ಕರೆ ಮಾಡಿ ವಿಚಾರಿಸಿದಾಗ ಕೆಲಸ ಕೊಡಬೇಕಾದರೆ 60 ಸಾವಿರ ರೂ. ಕಟ್ಟಬೇಕು ಎಂದು ಅವರು ತಿಳಿಸಿದರು. ಇದರಿಂದ ಅನುಮಾನಗೊಂಡ ನಾಗರತ್ನ ಬೈಂದೂರಿನ ಅರಣ್ಯ ಇಲಾಖೆಯಲ್ಲಿ ವಿಚಾರಿಸಿದರು. ಆಗ ಗೌತಮ್ ನೀಡಿದ ನೇಮಾಕಾತಿ ಪತ್ರ ಸುಳ್ಳು ಎಂಬುದಾಗಿ ತಿಳಿದುಬಂತು. ಅವರು ಇದೇ ರೀತಿ ನಾಗರತ್ನರ ಪರಿಚಯದ ಕೆರ್ಗಾಲಿನ ರಾಘವೇಂದ್ರ ಎಂಬವರಿಗೆ ವೆಬ್‌ಸೈಟ್ ಮುಖಾಂತರ ಅರ್ಜಿ ನಮೂನೆಯನ್ನು ಈ ಮೇಲ್ ಮಾಡಿ ನೇಮಕಾತಿ ಪತ್ರ ನೀಡಿ ಮೋಸ ಮಾಡಿ ಹಣವನ್ನು ಪಡೆದುಕೊಂಡಿದ್ದಾರೆ. ಆರೋಪಿಗಳು ಸರಕಾರಿ ಕೆಲಸ ಕೊಡುವುದಾಗಿ ಹಣವನ್ನು ಪಡೆದು ಕೇಂದ್ರ ಸರಕಾರದ ಹೆಸರಿನಲ್ಲಿ ಸುಳ್ಳು ದಾಖಲಾತಿ, ಮೊಹರುಗಳನ್ನು ಸೃಷ್ಟಿಸಿ ಕೊಂಡು ಅರಣ್ಯ ಇಲಾಖೆಯ ಹೆಸರಿನಲ್ಲಿ ಸುಳ್ಳು ವೆಬ್‌ಸೈಟನ್ನು ತಯಾರಿಸಿ ಆ ಮೂಲಕ ವಂಚನೆ ಮಾಡಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply