ಮಂಗಳೂರು : ಕೆಎಂಸಿ ಆಸ್ಪತ್ರೆಯಲ್ಲಿ ಅಪೂರ್ವ ಹೃದಯ ಶಸ್ತ್ರಚಿಕಿತ್ಸೆ

ಮಂಗಳೂರು: ದಕ್ಷಿಣ ಭಾರತದ ಅತ್ಯಂತ ದೊಡ್ಡ ಆರೋಗ್ಯ ಶುಶ್ರೂಷೆ ಸಮೂಹವಾದ ಮಣಿಪಾಲ್ ಹೆಲ್ತ್ ಎಂಟರ್‍ಪ್ರೈಸಸ್‍ನ ಅಂಗವಾಗಿರುವ ಕೆಎಂಸಿ ಹಾಸ್ಪಿಟಲ್ ಅತ್ಯಂತ ಅನನ್ಯ ಮತ್ತು ವಿರಳವಾದ ಆರೋಗ್ಯ ಸ್ಥಿತಿಯಿಂದ 20 ವರ್ಷ ವಯಸ್ಸಿನ ಮಹಿಳೆಯ ಜೀವವನ್ನು ಉಳಿಸಿ ರಕ್ಷಿಸಿದೆ. ಈ ರೋಗಿಗೆ ಹೈಡೇಟಿಡ್ ಗೆಡ್ಡೆ ಇದ್ದು ಹೃದಯದಲ್ಲಿ ಪರೋಪಜೀವಿಯಾಗಿ ಕಾಡಿತ್ತು. ಅತ್ಯುನ್ನತ ಮಟ್ಟದ ಕುಶಲತೆಯ ಅಗತ್ಯವಿದ್ದ ಅತ್ಯಂತ ಅಪಾಯಕಾರಿ ಶಸ್ತ್ರಚಿಕಿತ್ಸೆಯ ಮೂಲಕ ಗೆಡ್ಡೆಯನ್ನು ತೆಗೆದುಹಾಕಲಾಗಿದೆ. ಅತ್ಯಂತ ಪ್ರತಿಭಾನ್ವಿತ ಹೃದಯ ಮತ್ತು ಎದೆಭಾಗದ ಶಸ್ತ್ರಚಿಕಿತ್ಸಾ ತಜ್ಞರು, ಅರಿವಳಿಕೆ ತಜ್ಞರ ತಂಡ ಹಾಗೂ ಇತರೆ ಸಿಬ್ಬಂದಿ ಈ ಸವಾಲನ್ನು ದಾಟಿಬರುವಲ್ಲಿ ಶುದ್ಧ ವೈದ್ಯಕೀಯ ಉತ್ಕøಷ್ಟತೆ ಪ್ರದರ್ಶಿಸಿ ಈ ಶಸ್ತ್ರಕ್ರಿಯೆ ನಡೆಸಿದರು.
ಶಿವಮೊಗ್ಗ ಮೂಲದ ಪವಿತ್ರ(ಹೆಸರು ಬದಲಾಯಿಸಲಾಗಿದೆ) ಅವರನ್ನು ಈ ಹಿಂದೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸೇರಿಸಲಾಗಿತ್ತು. ಅಲ್ಲಿ ಆಕೆಗೆ ಅತ್ಯಂತ ವಿರಳ ಮಾದರಿಯ ಕ್ಯಾನ್ಸರ್ ಗೆಡ್ಡೆ ಹೃದಯದ ಎಡ ಕುಳಿ(ವೆಂಟ್ರಿಕಲ್)ಯಲ್ಲಿ ಇರುವುದನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದಯರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಗುರುತಿಸಿದ್ದರು. ಈ ರೀತಿಯ ಪರೋಪ ಜೀವಿ ಮನುಷ್ಯರಿಗೆ ನಾಯಿಗಳಿಂದ ಹರಡುತ್ತದೆ. ಕರುಳಿನ ಮೂಲಕ ಹರಡುವ ಇದು ಯಕೃತ್ತು ಮತ್ತು ಶ್ವಾಸಕೋಶಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಚಿಕಿತ್ಸೆ ನೀಡದಿದ್ದಲ್ಲಿ ದೊಡ್ಡ ಗಾತ್ರಕ್ಕೆ ಬೆಳೆಯಬಹುದು. ಆದರೆ ಹೃದಯದ ಕುಳಿಗಳಲ್ಲಿ ಇದು ಕಾಣಿಸಿಕೊಳ್ಳುವುದು ಬಹಳ ವಿರಳ.
ಅಂಬೇಡ್ಕರ್ ವೃತ್ತದಲ್ಲಿನ ಕೆಎಂಸಿ ಆಸ್ಪತ್ರೆಗೆ ರೋಗಿಯನ್ನು ವರ್ಗಾಯಿಸಲಾಯಿತು. ಅಲ್ಲಿ ಈ ಮೇಲಿನ ತೊಂದರೆಯನ್ನು ದೃಢಪಡಿಸಲಾಯಿತು. ಗೆಡ್ಡೆಯಿಂದ ಆಕೆಯ ಹೃದಯ ಕವಾಟಗಳಲ್ಲಿ ಒಂದು ಹಾನಿಗೊಳಗಾಗಿತ್ತು. ಇದರಿಂದ ಹೃದಯದೊಳಗೆ ರಕ್ತ ಸೋರಿಕೆ ಉಂಟಾಗಿತ್ತು. ಅಲ್ಲದೇ ಶ್ವಾಸಕೋಶದಲ್ಲಿ ರಕ್ತ ಸಂಚಯ, ಉನ್ನತ ಒತ್ತಡ ಸೃಷ್ಟಿಯಾಗಿತ್ತು. ಜೊತೆಗೆ ಆಕೆಗೆ ಯಕೃತ್ತು, ಸ್ಪ್ಲೀನ್ ಮತ್ತು ಮೂತ್ರಪಿಂಡಗಳಲ್ಲಿ ಗೆಡ್ಡೆಗಳಿದ್ದವು. ಉಸಿರಾಟದಲ್ಲಿ ತೊಂದರೆ ಮತ್ತು ಎರಡೂ ಕಾಲುಗಳಲ್ಲಿ ಊತ ಉಂಟಾಗಿ ಆಕೆಯ ಸಾಮಾನ್ಯ ಸ್ಥಿತಿ ಬಹಳ ಕಳಪೆಯಾಗಿತ್ತು.
ಗೆಡ್ಡೆಯನ್ನು ತೆಗೆಯಲು ಉನ್ನತ ಅಪಾಯದ ತೆರದ ಹೃದಯದ ಶಸ್ತ್ರಚಿಕಿತ್ಸೆಗೆ ಆಕೆ ಒಳಗಾಗಿದ್ದರು. ರೋಗಿಯನ್ನು ಹೃದಯ-ಶ್ವಾಸಕೋಶ ಯಂತ್ರಕ್ಕೆ ಜೋಡಿಸಿ ಶಸ್ತ್ರಕ್ರಿಯೆ ನಡೆಸಲಾಯಿತು. ಕವಾಟವನ್ನು ಕತ್ತರಿಸಿ ಹೃದಯದ ಪ್ರಮುಖ ಭಾಗದಿಂದ ದೊಡ್ಡ ಗೆಡ್ಡೆಯನ್ನು ತೆಗೆಯಲಾಯಿತು. ಅದರ ಬದಲಿಗೆ ನಂತರ ಕೃತಕ ಕವಾಟವನ್ನು ಜೋಡಿಸಲಾಯಿತು. ಹೃದಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಎ. ಜಿ. ಜಯಕೃಷ್ಣನ್, ಡಾ. ಬಲರಾಮನ್ ಮತ್ತು ಹೃದಯ ಸಂಬಂಧಿ ಅರಿವಳಿಕೆ ತಜ್ಞ ಡಾ. ರಾಮಮೂರ್ತಿರಾವ್ ಅವರ ನೇತೃತ್ವದ ವೈದ್ಯದ ತಂಡದಿಂದ ಶಸ್ತ್ರಕ್ರಿಯೆ ನಡೆಸಲಾಯಿತು.
ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಈ ಸಾಧನೆ ಮತ್ತೊಂದು ಪ್ರಥಮವಾಗಿದ್ದು, ಈ ರೀತಿಯ ಉನ್ನತ ಅಪಾಯದ ಶಸ್ತ್ರಕ್ರಿಯೆಯನ್ನು ಜಿಲ್ಲೆಯಲ್ಲಿ ಈ ಹಿಂದೆ ನಡೆಸಿರಲಿಲ್ಲ. ಸಂಪೂರ್ಣ ಕ್ರಮವನ್ನು ರೋಗಿಗೆ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಉಚಿತವಾಗಿ ನಡೆಸಲಾಗಿದೆ.
“ಕೆಎಂಸಿ ಆಸ್ಪತ್ರೆ ಅದ್ಭುತ ವೈದ್ಯರ ತಂಡವನ್ನು ಹೊಂದಿದೆ. ಇದರಿಂದ ಉನ್ನತ ಮಟ್ಟದ ವೈದ್ಯಕೀಯ ಫಲಿತಾಂಶಗಳು ಬರುತ್ತಿದ್ದು, ಈ ಪ್ರದೇಶದಲ್ಲಿ ನಮ್ಮನ್ನು ಅತ್ಯುತ್ತಮ ಆರೋಗ್ಯ ಶುಶ್ರೂಷೆ ಸೌಲಭ್ಯಗಳಲ್ಲಿ ಒಂದನ್ನಾಗಿಸಿವೆ. ನಮ್ಮ ಶಕ್ತಿಗೆ ಈ ಪ್ರಕರಣ ಅಲಂಕಾರಪ್ರಾಯವಾಗಿದೆ’’ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಆನಂದ್ ವೇಣುಗೋಪಾಲ್ ಹೇಳಿದರು.

Leave a Reply