ಮಂಗಳೂರು : ತುಮಕೂರಿನಲ್ಲಿ ರಸ್ತೆ ಅಫಘಾತ ಪಾವೂರು ಚರ್ಚಿನ ಮಾಜಿ ಧರ್ಮಗುರು ಸಹಿತ ಇಬ್ಬರ ಸಾವು

ಮಂಗಳೂರು : ಮಂಜೇಶ್ವರ ಸಮೀಪದ ಪಾವೂರು ಹೋಲಿ ಕ್ರಾಸ್‌ ಚರ್ಚ್‌ನ ಮಾಜಿ ಧರ್ಮಗುರು ಹಾಗೂ ನವೀಕೃತ ಚರ್ಚ್‌ ಕಟ್ಟಡದ ನಿರ್ಮಾತೃ ಫಾ | ತೋಮಸ್‌ ಮೈಲಾದೋರ್‌ (82) ಮತ್ತು ಇನ್ನೋರ್ವ ಧರ್ಮಗುರು ಫಾ| ಮಡ್ಲೆಮುತ್ತು ಅರುಳಪ್ಪ (38) ಜು . 18ರಂದು ಸಂಜೆ ತುಮಕೂರು ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

Priests-19-7

ಬೆಂಗಳೂರಿನಿಂದ ಸುಮಾರು 110 ಕಿ.ಮೀ. ದೂರದ ಅಜ್ಜನಹಳ್ಳಿಯಲ್ಲಿ ಒಂದು ದಿನದ ರಿಟ್ರೀಟ್‌ ಕಾರ್ಯಕ್ರಮ ಮುಗಿಸಿ ವಾಹನದಲ್ಲಿ 6 ಮಂದಿ ಧರ್ಮಗುರುಗಳು ಮತ್ತು ಒರ್ವ ಬ್ರದರ್ ಸಹಿತ 7 ಮಂದಿ ತುಮಕೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ಮಗುಚಿ ಬಿದ್ದು ಈ ಅಪಘಾತ ಸಂಭವಿಸಿದೆ. ಅಫಘಾತದಲ್ಲಿ ತೀವ್ರ ಗಾಯಗೊಂಡ ಫಾ | ತೋಮಸ್‌ ಮೈಲಾದೊರ್‌ ಮತ್ತು ಫಾ | ಅರುಳಪ್ಪ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

ಫಾ | ಸಿ.ವಿ. ಜಾರ್ಜ್‌, ಫಾ | ಟೋಮಿ, ಫಾ | ನಿತಿನ್‌ ಜಾರ್ಜ್‌, ಫಾ | ಪಾಯ್ಸ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಬ್ರದರ್‌ ಅವರ ವಿವರ ಹೆಸರು ತಿಳಿದು ಬಂದಿಲ್ಲ.

ಇವರೆಲ್ಲರೂ ಸಲೇಶಿಯನ್‌ ಡಾನ್‌ ಬೋಸ್ಕೊ ಸಂಸ್ಥೆಯ ಬೆಂಗಳೂರು ಪ್ರಾಂತಕ್ಕೆ ಸೇರಿದ ಗುರುಗಳಾಗಿರುತ್ತಾರೆ. ಫಾ | ತೋಮಸ್‌ ಮೈಲಾದೋರ್‌ ಅವರು ಮೂಲತ: ಕೇರಳದ ಕೊಟ್ಟಾಯಂ ಜಿಲ್ಲೆಯ ಪಿಕೋಯ್‌ ಗ್ರಾಮದ ನಿವಾಸಿಯಾಗಿದ್ದರು. ಬೆಂಗಳೂರಿನಲ್ಲಿ ಸಲೇಶಿಯನ್‌ ಪ್ರಾಂತಾಧಿಕಾರಿಯಾಗಿದ್ದ ಅವರು 1997 ರಲ್ಲಿ ಮಂಜೇಶ್ವರ ಸಮೀಪದ ಪಾವೂರು ಚರ್ಚ್‌ಗೆ ಆಗಮಿಸಿ 2006 ರ ತನಕ ಇಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಶತಮಾನದ ಇತಿಹಾಸವಿರುವ ಪಾವೂರು ಹೋಲಿ ಕ್ರಾಸ್‌ ಚರ್ಚ್‌ಗೆ ಅವರು ಹೊಸ ಕಟ್ಟಡವನ್ನು ಕಟ್ಟಿಸಿದ್ದು, 2005 ರಲ್ಲಿ ಇದರ ಆಶೀರ್ವಚನ ಮತ್ತು ಉದ್ಘಾಟನೆ ನೆರವೇರಿತ್ತು. 2006 ರಲ್ಲಿ ಅವರು ವರ್ಗಾವಣೆಗೊಂಡು ತುಮಕೂರಿಗೆ ತೆರಳಿದ್ದು, ಅಲ್ಲಿ ಆಧ್ಯಾತ್ಮಿಕ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು.

ಫಾ | ಅರುಳಪ್ಪ ಅವರು ಬೆಂಗಳೂರಿನ ಕನಕಪುರ ನಿವಾಸಿಯಾಗಿದ್ದು, 2007 ರಲ್ಲಿ ಗುರುದೀಕ್ಷೆ ಪಡೆದಿದ್ದರು. ತುಮಕೂರಿನ ಡಾನ್‌ಬೋಸ್ಕೊ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಫಾ | ತೋಮಸ್‌ ಮೈಲಾದೋರ್‌ ಅವರ ನಿಧನದ ಪ್ರಯುಕ್ತ ಮಂಜೇಶ್ವರದ ಡಾನ್‌ ಬೊನ್‌ಬೋಸ್ಕೊ ಶಾಲೆಗೆ ರಜೆ ಘೋಷಿಸಲಾಗಿದೆ.

 

Leave a Reply

Please enter your comment!
Please enter your name here