ಮಂಗಳೂರು: ಪಡೀಲು ಬಜಾಲ್ ರೈಲ್ವೇ ಕೆಳಸೇತುವೆ ಮೂಲಕ ಬಸ್ಸು ಸಂಚಾರಕ್ಕೆ ಸಾರ್ವಜನಿಕರ ಮೂಲಕ ಚಾಲನೆ ಕೊಟ್ಟ ಡಿವೈಎಫ್‍ಐ ಕಾರ್ಯಕರ್ತರು

ಮಂಗಳೂರು: ಪಡೀಲು ಬಜಾಲ್ ರೈಲ್ವೇ ಕೆಳಸೇತುವೆ ನಿರ್ಮಾಣ ಆಗುವುದು ಈ ಭಾಗದ ಜನರ ಬಹುಮುಖ್ಯ ಕನಸು. ಸಾರ್ವಜನಿಕರ ಸತತ ಹೋರಾಟದ ಪ್ರಯತ್ನದ ಭಾಗವಾಗಿ ಕೆಳಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆಯಿತು.

bajal

ರೈಲ್ವೇ ಸೇತುವೆ ಕಾಮಗಾರಿ ಪ್ರಾರಂಭ ಆಗಿದ್ದಿನಿಂದ ಈ ಮಾರ್ಗವಾಗಿ ವಾಹನ ಸಂಚಾರ ನಡೆಸಲು ಸಾಧ್ಯವಾಗದೇ ಇರುವುದರಿಂದ ತಾತ್ಕಾಲಿಕವಾಗಿ ಬದಲಿ ಮಾರ್ಗವಾಗಿ ಬಸ್ಸುಗಳು ಹಾಗೂ ಖಾಸಗೀ ವಾಹನಗಳು ಸಂಚಾರ ನಡೆಸುತ್ತಿದ್ದವು. ಒಂದು ಕಡೆ ಕಾಮಗಾರಿಯು ಸರಿಯಾಗಿ ನಡೆಯುತ್ತಿರಲಿಲ್ಲ ಹಲವು ಸಲ ವಿಘ್ನಗಳು ಎದುರಾಗಿತ್ತು. ಹಾಗೂ ನಿಧಾನಗತಿಯ ಕೆಲಸದಿಂದಾಗಿ ಜನ ದಿನೇ ದಿನೇ ಕಷ್ಟ ಅನುಭವಿಸುವಂತಾಯಿತು. ಕೊನೆಗೂ ರೈಲ್ವೇ ಇಲಾಖೆ ಸೇತುವೆ ಕಾಮಗಾರಿ ಪೂರ್ಣಗೊಳಿಸಿದರೂ ಈ ಮಧ್ಯೆ ಮಹಾನಗರ ಪಾಲಿಕೆ ಸೇತುವೆಯ ಎರಡೂ ಕಡೆ ಸಂಪರ್ಕ ರಸ್ತೆ ಕಲ್ಪಿಸಲು ಮೀನಾಮೇಷ ಎನಿಸುತ್ತಿತ್ತು. ಕಳೆದ ಸಪ್ಟೆಂಬರ್ ತಿಂಗಳ ಒಳಗೆ ಸಾರ್ವಜನಿಕರ ಬಳಕೆಗೆ ಒದಗಿಸಲಾಗುವುದು ಎಂದು ಮೇಯರ್‍ರವರು ಭರವಸೆ ನೀಡಿದ್ದರೂ ಇಲ್ಲಿಯವರೆಗೆ ಯಾವುದೇ ಪ್ರಗತಿಯನ್ನು ಕಂಡಿಲ್ಲ. ಕೇವಲ ಸ್ಥಳೀಯ ನಾಗರೀಕರ ಒತ್ತಾಯಕ್ಕೆ ಹಾಗೂ ಡಿವೈಎಫ್‍ಐ ಸಂಘಟನೆಯ ಒತ್ತಡಕ್ಕೆ ಒಂದಷ್ಟು ಸಂಪರ್ಕ ರಸ್ತೆಯನ್ನು ಸರಿಪಡಿಸಲಾಗಿದ್ದರೂ ವಾಹನ ಓಡಾಟ ನಡೆಸಲು ಅನುವು ಮಾಡಿರಲಿಲ್ಲ.

ಈ ಹಿನ್ನಲೆಯಲ್ಲಿ ಇಂದು ಡಿವೈಎಫ್‍ಐ ಬಜಾಲ್ ಪಕ್ಕಲಡ್ಕ ಪ್ರದೇಶದ ಡಿವೈಎಫ್‍ಐ ಕಾರ್ಯಕರ್ತರು ರೈಲ್ವೇ ಕೆಳ ಸೇತುವೆ ಮುಖಾಂತರ ಬಸ್ಸು ಸಂಚಾರ ನಡೆಸಲು ಸಾರ್ವಜನಿಕರ ಮೂಲಕ ಚಾಲನೆ ನೀಡಿದರು. ಈ ಚಾಲನೆಗೆ ಈ ಮಾರ್ಗವಾಗಿ ಓಡುವ ಬಸ್ಸುಗಳ ಮಾಲಕರು ಹಾಗೂ ಬಸ್ಸು ಸಿಬ್ಬಂದಿಗಳು ಬೆಂಬಲವನ್ನು ವ್ಯಕ್ತಪಡಿಸಿದರು.

ಈ ವೇಳೆ ಸ್ಥಳಕ್ಕಾಗಮಿಸಿದ ಸ್ಥಳೀಯ ಕಾರ್ಪೊರೇಟರ್ ವಿಜಯಕುಮಾರ್ ಶೆಟ್ಟಿ, ಬಸ್ ಸಂಚಾರ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ಡಿವೈಎಫ್‍ಐ ಕಾರ್ಯಕರ್ತರು ಹಾಗೂ ಕಾರ್ಪೊರೇಟರ್ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೂ ಬಸ್ಸುಗಳು ರೈಲ್ವೇ ಕೆಳಸೇತುವೆ ಮೂಲಕವೇ ಸಂಚರಿಸಲು ಪ್ರಾರಂಭಿಸಿತು. ಊರಿನ ನಾಗರಿಕರು ಡಿವೈಎಫ್‍ಐ ಕಾರ್ಯಕರ್ತರ ಈ ಕೆಲಸಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದ ನೇತೃತ್ವದಲ್ಲಿ ಡಿವೈಎಫ್‍ಐ ಬಜಾಲ್ ಪ್ರದೇಶದ ಮುಖಂಡರಾದ ಯಶ್‍ಪಾಲ್, ರಿತೇಶ್, ಪ್ರಕಾಶ್, ವರಪ್ರಸಾದ್, ಪ್ರಜ್ವಲ್ ಹಾಗೂ ಸಿಪಿಐ(ಎಂ) ಮುಖಂಡರಾದ ಪ್ರೇಮನಾಥ್ ಜಲ್ಲಿಗುಡ್ಡೆ, ಸುರೇಶ್ ಬಜಾಲ್ ವಹಿಸಿದ್ದರು. ಡಿವೈಎಫ್‍ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಈ ವೇಳೆ ಉಪಸ್ಥಿತರಿದ್ದರು.

Leave a Reply

Please enter your comment!
Please enter your name here