ಮಂಗಳೂರು: ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಸಂಬಂಧ ಅನುಸರಿಸಬೇಕಾದ ಮಾರ್ಗಸೂಚಿಗಳ ಸಭೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ನಿರ್ಮಿಸಲಾದ ಸಮಿತಿಯ ಸಭೆಯು ಬೆಂದೂರ್‍ವೆಲ್‍ನಲ್ಲಿ ಬುಧವಾರ ಜರುಗಿತು.

2-child-line-20150729-001

ಸಮಿತಿಯ ಅಧ್ಯಕ್ಷ ರೆನ್ನಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವ ಮುನ್ನ ಜಿಲ್ಲಾಧಿಕಾರಿಗಳು 9 ಮಂದಿ ಸದಸ್ಯರ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ಜಿಲ್ಲೆಯಲ್ಲಿನ ಪ್ರಸ್ತುತ ಸ್ಥಿತಿಗತಿಯನ್ನು ಪರೀಶೀಲನೆ ಮಾಡಲಿದೆ. ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಯಾವೆಲ್ಲ ರೂಪುರೇಷೆಗಳು ಅಗತ್ಯವಿದೆ ಎನ್ನುವುದನ್ನು ತಯಾರಿಸಲು ಸಮಿತಿಗೆ ಅವಕಾಶವಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಭಿಕ್ಷಾಟನೆ ಹೆಚ್ಚಿದ್ದು, ಹೆಚ್ಚಿನ ಮಕ್ಕಳು ಇತರ ಜಿಲ್ಲೆ ಹಾಗೂ ರಾಜ್ಯಗಳಿಂದ ತಮ್ಮ ಕುಟುಂಬಗಳೊಂದಿಗೆ ಆಗಮಿಸಿದ್ದು, ಹೆತ್ತವರು ತಮ್ಮ ಮಕ್ಕಳನ್ನು ಭಿಕ್ಷಾಟನೆಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ಹಲವಾರು ಮಕ್ಕಳು ನಗರದ ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಭಿಕ್ಷಾಟನೆಯನ್ನು ನಡೆಸುವುದನ್ನುನಾವು ಕಾಣುತ್ತಿದ್ದು, ಹೇಗೆ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವುದು ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಮಿಕ ಅಧಿಕಾರಿ ನಾಗೇಶ್ ಅವರು ಬಾಲ ಭಿಕ್ಷುಕರು ಮತ್ತು ಮೀನು ಅಥವಾ ಇತರ ವಸ್ತುಗಳ ಮಾರಾಟ ಮಾಡುವ ಮಕ್ಕಳನ್ನು ಬಾಲಕಾರ್ಮಿಕರು ಎಂದು ಪರಿಗಣಿಸಲಾಗುವುದಿಲ್ಲ ಎಂದರು.

ಸಮಿತಿಯ ಅಧ್ಯಕ್ಷ ರೆನ್ನಿ ಮಾತನಾಡಿ ಮಂಗಳೂರು ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಇತರ ಜಿಲ್ಲೆಯ ಹಾಗೂ ರಾಜ್ಯ ಜನರನನ್ನು ಆಕರ್ಷಿಸುತ್ತಿದೆ. ಹೆಚ್ಚು ಹೆಚ್ಚು ವಲಸೆ ಕಾರ್ಮಿಕರ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದು, ವಸ್ತುಗಳ ಮಾರಾಟ ಇನ್ನಿತರ ಕೆಲಸಗಳಲ್ಲಿ ಅವರುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಂತಹ ಮಕ್ಕಳನ್ನು ಭಿಕ್ಷಾಟನೆ ಅಥವಾ ವಸ್ತುಗಳ ಮಾರಾಟ ಮಾಡುವ ಸಲುವಾಗಿ ನಗರದಲ್ಲಿ ಉಪಯೋಗಿಸಿಕೊಳ್ಳುವುದನ್ನು ನೋಡಿದರೆ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಿಸುವುದು ಅಸಾಧ್ಯ. 14 ವರ್ಷ ವಯೋಮಿತಿಯ ವರೆಗಿನ ಯಾರು ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಅವರನ್ನು ಬಾಲಕಾರ್ಮಿಕರು ಎಂದು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಕೆಲಸ ಹೆಚ್ಚು ಇದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ವಶಿಕ್ಷ ಅಭಿಯಾನ ಅಧಿಕಾರಿ ಗೀತಾ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಕರು ಎಲ್ಲಾ ಮಕ್ಕಳ ವಿವರಗಳನ್ನು ಪಡೆಯಲಿದ್ದು, ಶಾಲೆಗೆ ಹೋಗದಿರುವ ಮಕ್ಕಳ ಮಾಹಿತಿ ಸಂಗ್ರಹಿಸಲಾಗುತ್ತಿದೆ ಅಂತಹ ಮಕ್ಕಳ ಮನೆಗೆ ಭೇಟಿ ನೀಡಿ ಪೋಷಕರಿಗೆ ತಿಳಿಹೇಳುವುದರ ಮೂಲಕ ಅವರುಗಳ ಮಕ್ಕಳನ್ನು ಶಾಲೆಗೆ ಸೇರಿಸಲಾಗುತ್ತದೆ. ಎಲ್ಲಿಯಾದರು ಮಕ್ಕಳ ಸಾಗಾಟದಂತ ಪ್ರಕರಣಗಳು ವರದಿಯಾದಲ್ಲಿ ಅಥವಾ ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು. ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಹಾಗೂ ಬಾಲ ಭಿಕ್ಷಾಟನೆ ನಿರ್ಮೂಲನ ಮಾಡುವ ನಿಟ್ಟಿನಲ್ಲಿ ನಾವು ಹೆಚ್ಚು ಒತ್ತುನೀಡಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾರ್ಡ್ ಮತ್ತು ಗ್ರಾಮ ನೋಂದಣಾ ರಿಜಿಸ್ಟರ್‍ಗಳನ್ನು ತಯಾರಿಸಿದ್ದು ಇದರಿಂದ ಗ್ರಾಮಪಂಚಾಯತುಗಳಲ್ಲಿ ಮಕ್ಕಳ ಸಂಪೂರ್ಣ ವಿವರ ಲಭ್ಯವಾಗಲಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿ ಕಾರ್ಮಿಕ ಅಧಿಕಾರಿ ನಾಗೇಶ್ ಅವರು ಗ್ರಾಮ ಹಾಗೂ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಇಂತಹ ಸಮಿತಿಗಳನ್ನು ನಿರ್ಮಾಣ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಆ ಸಮಿತಿಯು ಗ್ರಾಮ ಹಾಗೂ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಆಗಾಗ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬಾಲ ಕಾರ್ಮಿಕರ ಬಗ್ಗೆ ಪರೀಶೀಲನೆ ನಡೆಸಬೇಕು. ವಲಸೆ ಕಾರ್ಮಿಕರು ನೆಲೆಸುವ ಪ್ರದೇಶಗಳಿಗೆ ಭೇಟಿ ನೀಡಿ ಅವರು ಮಾಡುವ ಕೆಲಸಗಳ ಬಗ್ಗೆ ಮಾತ್ತು ಅವರು ಎಲ್ಲಿಂದ ಬಂದಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು ಎಂದರು.

ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಜನರಲ್ಲಿ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ, ಗ್ರಾಮ ಪಂಚಾಯತ್‍ನಲ್ಲಿ ಕಾರ್ಮಿಕ ಇಲಾಖೆಯಿಂದ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಉದ್ದಿಮೆ ಪರವಾನಿಗೆ ನೀಡುವಾಗ ಅಥವಾ ನವೀಕರಿಸುವ ವೇಳೆ ಬಾಲ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳದಂತೆ ಸ್ಪಷ್ಟವಾಗಿ ಸೂಚನೆ ನೀಡಬೇಕು. ಅಂಗವಾಡಿ ಶಿಕ್ಷಕರು ಈ ನಿಟ್ಟಿನಲ್ಲಿ ಸಹಾಯ ಮಾಡುತ್ತಾರೆ ಎಂದರು.

ಪ್ರತಿಯೊಂದು ಮನೆಯಿಂದ ತಮ್ಮ ಮನೆಯಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ಅಧಿಕೃತವಾಗಿ ಸಹಿ ಮಾಡಿದ ಘೋಷಣಾ ಪತ್ರವನ್ನು ಪಡೆಯಲಾಗುವುದು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಗರ ವ್ಯಾಪ್ತಿಯಲ್ಲಿ ಆರಂಭಿಸಲಾಗುವುದು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ಮುಕ್ತ ಗ್ರಾಮ ಎಂಬ ಕುರಿತು ವರದಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಈ ಪ್ರಕ್ರಿಯೆ ವರ್ಷವಿಡೀ ನಡೆಯಲಿದೆ ಎಂದರು.

ಸಭೆಯಲ್ಲಿ ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಹಿಲ್ಡಾ ರಾಯಪ್ಪನ್, ಸಾಮಾಜಿಕ ಕಾರ್ಯಕರ್ತೆ ವಾಯಲೆಟ್ ಪಿರೇರಾ, ಆರೋಗ್ಯ ನಿರೀಕ್ಷಕಿ ನಿರ್ಮಲ, ಕಾರ್ಮಿಕ ಅಧಿಕಾರಿ ಶ್ರಿಪತ್ ರಾಜ್, ಮೈಲಾರಪ್ಪ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಶ್ರೀನಿವಾಸ್, ಹಿರಿಯ ಕಾರ್ಮಿಕ ಅಧಿಕಾರಿ ಬಿ ಆರ್ ಕುಮಾರ್, ಗಣಪತಿ ಉಪಸ್ಥಿತರಿದ್ದರು.

Leave a Reply