ಮಂಗಳೂರು: ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಮೂಹ ಅಭಿಯಾನ: ಸಿಇಓ ಸೂಚನೆ

ಮಂಗಳೂರು: ಡೆಂಗ್ಯು, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜಿಲ್ಲೆಯ ಎಲ್ಲೆಡೆ ಬೃಹತ್ ಸಮೂಹ ಅಭಿಯಾನ ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚಿಸಿದ್ದಾರೆ.

zp_ceo_srividya

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಸಾಂಕ್ರಾಮಿಕ ರೋಗಗಳ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಮತ್ತು ಶಿಕ್ಷಣ ನೀಡುವ ಕಾರ್ಯಕ್ರಮವನ್ನು ತೀವ್ರಗೊಳಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ನಿರಂತರವಾಗಿ ಮುಂದುವರಿಸಬೇಕು. ಎಲ್ಲಾ ಸರಕಾರಿ ಕಚೇರಿ, ಶಾಲಾ, ಕಾಲೇಜು, ಹಾಸ್ಟೆಲ್‍ಗಳು, ಅಂಗನವಾಡಿಗಳ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಲು ಅವರು ತಿಳಿಸಿದರು.

ಯಾವುದೇ ಡೆಂಗ್ಯು ಪ್ರಕರಣ ಪತ್ತೆಯಾದರೆ, ತಕ್ಷಣವೇ ಆ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಆಸುಪಾಸಿನ ಸಾರ್ವಜನಿಕರ ಎಲಿಝಾ ಪರೀಕ್ಷೆ ನಡೆಸಬೇಕು. ಇದಲ್ಲದೆ, ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲೂ ಫಾಗಿಂಗ್ ಯಂತ್ರದ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಪ್ರತೀ ತಾಲೂಕಿನಲ್ಲಿ 2-3 ತಂಡ ಮಾಡಿ ಫಾಗಿಂಗ್ ಸಿಂಪಡಿಸಬೇಕು. ಕೆಟ್ಟು ಹೋಗಿರುವ ಫಾಗಿಂಗ್ ಯಂತ್ರಗಳನ್ನು ತಕ್ಷಣವೇ ದುರಸ್ತಿಗೊಳಿಸುವಂತೆ ಸಿ.ಇ.ಓ. ಅವರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಕೆಲವು  ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆಯಿಂದ ತಕ್ಷಣಕ್ಕೆ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತೀ ತಾಲೂಕಿನಲ್ಲೂ ಒಂದು ಸುಸಜ್ಜಿತ ಮೊಬೈಲ್ ಕ್ಲಿನಿಕ್ ಸ್ಥಾಪಿಸಲು ಸೂಚಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ನಿರಂತರವಾಗಿ ಈ ಮೂಲಕ ಗ್ರಾಮೀಣ ಜನರ ಆರೋಗ್ಯದತ್ತ ಗಮನಹರಿಸುವಂತೆ ತಿಳಿಸಿದರು.

ಡೆಂಗ್ಯು ನಿಯಂತ್ರಣಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ತಮ್ಮ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಬೇಕು.  ಡೆಂಗ್ಯು ಭೀತಿಯಿಂದ ತಾಲೂಕು ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ  ಜಮಾಯಿಸಿ, ರೋಗ ಇನ್ನಷ್ಟು ಹರಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಚಿಕಿತ್ಸೆ ನೀಡಲು ಕ್ರಮ ವಹಿಸುವಂತೆ ಅವರು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ 2015ನೇ ವರ್ಷದಲ್ಲಿ ಮೇ ಅಂತ್ಯದವರೆಗೆ 55 ಡೆಂಗ್ಯು ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಮಂಗಳೂರು ತಾ.-22, ಬಂಟ್ವಾಳ-9, ಪುತ್ತೂರು-3, ಬೆಳ್ತಂಗಡಿ-10 ಹಾಗೂ ಸುಳ್ಯ ತಾಲೂಕಿನಲ್ಲಿ 11 ಡೆಂಗ್ಯು ಪ್ರಕರಣಗಳು ದೃಢಪಟ್ಟಿದೆ. ಡೆಂಗ್ಯು ರೋಗ ಪತ್ತೆಯಾದ ಪರಿಸರದ 500 ಮೀಟರ್ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ಅಲ್ಲದೆ, 50 ಮನೆಗಳ ಪರೀಕ್ಷೆ ಮಾಡಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅರುಣ್ ಕುಮಾರ್, ಜಿಲ್ಲಾ ವಿಚಕ್ಷಣಾಧಿಕಾರಿ ಡಾ.ರಾಜೇಶ್, ತಾಲೂಕು ವೈದ್ಯಾದಿಕಾರಿಗಳು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here