ಮೇ 8ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ 

ಮ0ಗಳೂರು:  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 8ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಮೇ 8ರಂದು ನವದೆಹಲಿಯಿಂದ ಕೇರಳಕ್ಕೆ ಹೋಗುವ ಹಾದಿಯಲ್ಲಿ ಬೆಳಿಗ್ಗೆ 9.45ಕ್ಕೆ ಮಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ, 9.50ಕ್ಕೆ ಹೆಲಿಕಾಪ್ಟರ್ ಮೂಲಕ ಕಾಸರಗೋಡಿಗೆ ತೆರಳಲಿದ್ದಾರೆ. ನಂತರ 11.55ಕ್ಕೆ ಮಂಗಳೂರು ವಿಮಾನನಿಲ್ದಾಣಕ್ಕೆ ಹಿಂದಿರುಗುವ ಪ್ರಧಾನಿ, 12 ಗಂಟೆಗೆ ಕೊಚ್ಚಿಗೆ ತೆರಳಲಿದ್ದಾರೆ.
ಪೂರ್ವಭಾವಿ ಸಭೆ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಉನ್ನತಮಟ್ಟದ ಸಭೆ ನಡೆಯಿತು. ಪ್ರಧಾನಿ ಹಾಗೂ ಅವರ ಭದ್ರತಾ ತಂಡದ ಆಗಮನದ ಪ್ರಯುಕ್ತ ವಿಮಾನನಿಲ್ದಾಣ ಮತ್ತು ನಗರದಲ್ಲಿ ಕೈಗೊಳ್ಳಬೇಕಾದ ಭದ್ರತಾ ವ್ಯವಸ್ಥೆ, ವೈದ್ಯಕೀಯ, ವಸತಿ ಮತ್ತು ತುರ್ತುಸೇವಾ ಸೌಲಭ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಪಶ್ಚಿಮ ವಲಯ ಐಜಿಪಿ ಅಮೃತಪಾಲ್, ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ವಿಮಾನನಿಲ್ದಾಣ ನಿರ್ದೇಶಕ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here