ಮ0ಗಳೂರು: ಜಿ.ಪಂ. ತಾ.ಪಂ. ಚುನಾವಣೆ: ಪ್ರತೀ ತಾಲೂಕಿಗೆ 3 ತಂಡ- ಜಿಲ್ಲಾಧಿಕಾರಿ

ಮ0ಗಳೂರು : ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಲು ಜಿಲ್ಲೆಯ ಪ್ರತೀ ತಾಲೂಕಿಗೆ 3 ಸಂಚಾರಿ ತಂಡಗಳನ್ನು (ಫ್ಲೈಯಿಂಗ್ ಸ್ಕ್ವಾಡ್) ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.
ಅವರು ಭಾನುವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಈ ನಿಗಾ ತಂಡದಲ್ಲಿ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಗಳು ಇರಲಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತೀವ್ರ ನಿಗಾ ಇಡಲಿದೆ ಎಂದು ಅವರು ಹೇಲಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಜಿಲ್ಲಾ ಪಂಚಾಯತ್ ಹಾಗೂ 136 ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಪ್ರತೀ ಮತಗಟ್ಟೆಗೆ 5 ಸಿಬ್ಬಂದಿ/ಅಧಿಕಾರಿಗಳನ್ನು ನಿಯೋಜಿಸಲಾಗುವುದು. ತಹಶೀಲ್ದಾರ್‍ಗಳು ಪ್ರತೀ ಮತಗಟ್ಟೆಯನ್ನು ಕೂಡಲೇ ವೈಯಕ್ತಿಕವಾಗಿ ಪರಿಶೀಲಿಸಬೇಕು. ಮಸ್ಟರಿಂಗ್, ಡಿಮಸ್ಟರಿಂಗ್ ಕೇಂದ್ರ, ಸ್ಟ್ರಾಂಗ್ ರೂಂ ಹಾಗೂ ಮತ ಎಣಿಕೆ ಕೇಂದ್ರಗಳನ್ನು ಕೂಡಲೇ ಗುರುತಿಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಚುನಾವಣೆ ಸಂದರ್ಭದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಅನುಮತಿ ಅಗತ್ಯವಿಲ್ಲ. ಆದರೆ, ರಾಜಕೀಯ ವ್ಯಕ್ತಿಗಳು ಪಾಲ್ಗೊಳ್ಳುವ, ರಾಜಕೀಯ ಹಿನ್ನೆಲೆಯುಳ್ಳ ಸಂಘಟನೆಗಳ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯ. ಆಯಾ ತಾಲೂಕಿನ ಜಿ.ಪಂ. ಕ್ಷೇತ್ರಗಳಿಗೆ ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳು ಅನುಮತಿ ನೀಡಲು ಸಕ್ಷಮ ಪ್ರಾಧಿಕಾರಿಯಾಗಿರುತ್ತಾರೆ. ಈ ನಿಟ್ಟಿನಲ್ಲಿ ಪ್ರತೀ ತಾಲೂಕಿನಲ್ಲಿ ಏಕಗವಾಕ್ಷಿ ಕೇಂದ್ರ ತೆರೆಯುವಂತೆ ಎ.ಬಿ. ಇಬ್ರಾಹಿಂ ತಿಳಿಸಿದರು. ಕಾರ್ಯಕ್ರಮ ನಡೆಸುವ ಸಂಘಟಕರು ಕನಿಷ್ಠ 3 ದಿವಸ ಮೊದಲು ಅನುಮತಿಗೆ ಅರ್ಜಿ ಸಲ್ಲಿಸಬೇಕು. ತಾಲೂಕು ಚುನಾವಣಾಧಿಕಾರಿಗಳು ಅನಗತ್ಯವಾಗಿ ಅನುಮತಿ ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಬಾರದು. ಬ್ಯಾನರ್, ಕಟೌಟ್ ಅಳವಡಿಕೆಗೆ ಆಯಾ ಗ್ರಾಮ ಪಂಚಾಯತ್‍ಗಳಿಂದ ಅನುಮತಿ ಪಡೆದಿರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ಪೊಲೀಸ್ ಇಲಾಖೆಯು ಜ.30ರೊಳಗೆ ಗುರುತಿಸಬೇಕು. ಧಾರ್ಮಿಕ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಕ್ಕೆ ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ಮರುಮತದನವಾಗದಂತೆ ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಅಧಿಕಾರಿಗಳು ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ, ತಾಲೂಕು ಚುನಾವಣಾಧಿಕಾರಿಗಳು, ತಹಶೀಲ್ದಾರ್‍ಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply